ಮನೆ ಕಾನೂನು ರಾಜ್ಯದ ಏಳು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ!

ರಾಜ್ಯದ ಏಳು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ!

0

ಬೆಂಗಳೂರು: ರಾಜ್ಯದಾದ್ಯಂತ ಭ್ರಷ್ಟಾಚಾರ ವಿರುದ್ಧದ ಕಠಿಣ ಹೋರಾಟ ಮುಂದುವರೆಸಿದ ಲೋಕಾಯುಕ್ತ ವಿಭಾಗ, ಇಂದು ಬೆಳಗಿನ ಜಾವ ರಾಜ್ಯದ ಏಳು ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಬೆಂಗಳೂರು, ತುಮಕೂರು, ಯಾದಗಿರಿ, ಮಂಗಳೂರು, ವಿಜಯಪುರ ಸೇರಿದಂತೆ ಹಲವಾರು ಜಿಲ್ಲೆಗಳಾದ್ಯಂತ ಏಕಕಾಲದಲ್ಲಿ ದಾಳಿ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ 12 ಸ್ಥಳಗಳಲ್ಲಿ, ತುಮಕೂರಿನಲ್ಲಿ 7, ಬೆಂಗಳೂರು ಗ್ರಾಮಾಂತರದಲ್ಲಿ 8, ಯಾದಗಿರಿಯ 5, ಮಂಗಳೂರಿನಲ್ಲಿ 4 ಮತ್ತು ವಿಜಯಪುರದಲ್ಲಿ 4 ಸ್ಥಳಗಳಲ್ಲಿ ದಾಳಿ ನಡೆದಿದೆ.

ದಾಳಿಗೆ ಒಳಪಟ್ಟಿರುವ ಅಧಿಕಾರಿಗಳು

  1. ರಾಜಶೇಖರ್ – ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ತುಮಕೂರು
  2. ಮಂಜುನಾಥ್ – ಸರ್ವೆ ಸೂಪರ್ವೈಸರ್, ಮಂಗಳೂರು
  3. ರೇಣುಕಾ – ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ, ವಿಜಯಪುರ
  4. ಮುರಳಿ ಟಿವಿ – ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶನಾಲಯ, ಬೆಂಗಳೂರು
  5. ಹೆಚ್‌ಆರ್ ನಟರಾಜ್ – ಇನ್ಸ್‌ಪೆಕ್ಟರ್, ಕಾನೂನು ಮಾಪನಶಾಸ್ತ್ರ, ಬೆಂಗಳೂರು
  6. ಅನಂತ್ ಕುಮಾರ್ – ಎಸ್ ಡಿಎ, ಹೊಸಕೋಟೆ ತಾಲೂಕು ಕಚೇರಿ, ಬೆಂಗಳೂರು ಗ್ರಾಮಾಂತರ
  7. ಉಮಾಕಾಂತ್ – ತಹಶೀಲ್ದಾರ್, ಶಹಾಪುರ ತಾಲೂಕು, ಯಾದಗಿರಿ

ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ್ ಉಮಾಕಾಂತ್ ಹಳ್ಳೆ ಅವರ ಅಕ್ಕಮಹಾದೇವಿ ಬಡಾವಣೆಯ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಅವರು ಅವರ ಆದಾಯಕ್ಕೆ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿಯೇ ಈ ಕ್ರಮ ಕೈಗೊಳ್ಳಲಾಗಿದೆ.

ತುಮಕೂರಿನಲ್ಲಿ ನಿರ್ಮಿತಿ ಕೇಂದ್ರದ ಎಂಡಿ ರಾಜಶೇಖರ್ ಹಾಗೂ ಅವರ ಸಹೋದರನ ಮನೆಗಳಲ್ಲಿ ಲೋಕಾಯುಕ್ತ ತಂಡ ದಾಖಲೆಗಳ ಪರಿಶೀಲನೆ ನಡೆಸಿದ್ದು, ಒಟ್ಟು ಏಳು ಕಡೆ ದಾಳಿ ನಡೆದಿದೆ.

ವಿಜಯಪುರದ ಸೆಂಟ್ ಜೋಸೆಫ್ ಶಾಲೆಯ ಹಿಂಭಾಗದಲ್ಲಿರುವ ರೇಣುಕಾ ಅವರ ನಿವಾಸದಲ್ಲಿ ಡಿವೈಎಸ್‌ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ. ಮಂಗಳೂರಿನಲ್ಲಿ ಸರ್ವೆ ಮೇಲ್ವಿಚಾರಕ ಮಂಜುನಾಥ್ ಮನೆ ಹಾಗೂ ಕಚೇರಿ ಮೇಲೆ ದಕ್ಷಿಣ ಕನ್ನಡ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ನೇತೃತ್ವದಲ್ಲಿ ದಾಳಿ ನಡೆದಿದೆ.

ಹೊಸಕೋಟೆ ತಾಲೂಕಿನ ಬೋದನಹೊಸಹಳ್ಳಿಯಲ್ಲಿರುವ ಎಸ್‌ಡಿಎ ಅನಂತ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಅವರು ಭೂ ಮಂಜೂರಾತಿ ಇಲಾಖೆಯಲ್ಲಿ ದುಡಿಯುತ್ತಿದ್ದ ಸಂದರ್ಭದಲ್ಲಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿದೆ.

ಈ ಎಲ್ಲಾ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಇರುವ ಬ್ಯಾಂಕ್ ದಾಖಲೆಗಳು, ಆಸ್ತಿ ದಾಖಲೆಗಳು ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ದಾಖಲೆ ಸಂಗ್ರಹದ ನಂತರ ಮುಂದೆ ನ್ಯಾಯಾನುಗತ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.