ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಭಯೋತ್ಪಾದಕರು ಹತ್ಯೆಗೊಳ್ಳುವ ಮೂಲಕ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ದೊರೆತಿದೆ. ಗುರುವಾರ ನಡೆದ ಈ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ, ಕಾಶ್ಮೀರ ಪೊಲೀಸ್ ಹಾಗೂ ಪ್ಯಾರಾಮಿಲಿಟರಿ ಪಡೆಗಳು ಪಾಲ್ಗೊಂಡಿದ್ದವು.
ದಕ್ಷಿಣ ಕಾಶ್ಮೀರದ ಅವಂತಿಪೋರಾ ತಾಲೂಕಿನ ನಾದೇರ್ ಟ್ರಾಲ್ ಪ್ರದೇಶದಲ್ಲಿ ಉಗ್ರರು ನೆಲೆಸಿರುವ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಸ್ಥಳವನ್ನು ಬಂದೋಬಸ್ತು ಮಾಡಿದ್ದು, ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಈ ವೇಳೆ, ಶೋಧ ಕಾರ್ಯಚರಣೆ ವೇಳೆ ಅಡಗಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದು, ತಕ್ಷಣವೇ ಪ್ರತಿಯಾಗಿ ಕಾರ್ಯಾಚರಣೆ ಆರಂಭಿಸಲಾಯಿತು.
ಎನ್ಕೌಂಟರ್ನಲ್ಲಿ ಮೂರು ಉಗ್ರರು ಸ್ಥಳದಲ್ಲಿಯೇ ಹತ್ಯೆಗೊಳ್ಳಿದ್ದು, ಅವರನ್ನು ಆಸಿಫ್ ಶೇಖ್, ಅಮೀರ್ ಹಾಗೂ ಯಾವರ್ ಎಂದು ಗುರುತಿಸಲಾಗಿದೆ. ಇವರಲ್ಲಿ ಕನಿಷ್ಠ ಇಬ್ಬರು ಜೈಷ್-ಎ-ಮೊಹಮ್ಮದ್ ಅಥವಾ ಲಷ್ಕರ್ ಎ ತೈಬಾ ಸಂಘಟನೆಯ ಸದಸ್ಯರಾಗಿರುವ ಶಂಕೆ ವ್ಯಕ್ತವಾಗಿದೆ.
ಎನ್ಕೌಂಟರ್ ನಡೆದ ಪ್ರದೇಶದಲ್ಲಿ ಭದ್ರತಾ ಪಡೆಗಳು ಇನ್ನೂ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಸ್ಥಳದಲ್ಲಿನ ಸಂಚಾರವನ್ನು ನಿರ್ಬಂಧಿಸಲಾಗಿದೆ.














