ಬಾಗಲಕೋಟೆ : ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದ ಕುಟುಂಬದಲ್ಲಿ ಕ್ಷಣಾರ್ಧದಲ್ಲಿ ದುಃಖದ ಛಾಯೆ ಆವರಿಸಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ವರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ದಿಗ್ಭ್ರಮೆ ಮೂಡಿಸಿದೆ.
ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ವಿವಾಹ ಸಮಾರಂಭದಲ್ಲಿ, ವರ ಪ್ರವೀಣ್ ಕುರ್ನೆ ಅವರು ತಾಳಿ ಕಟ್ಟಿದ ತಕ್ಷಣವೇ ಕುಸಿದು ಬಿದ್ದು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಈ ಭೀಕರ ಘಟನೆ ಮದುವೆ ಮಂಟಪದಲ್ಲೆ ನಡೆದಿದೆ. ಪ್ರವೀಣ್ ಅವರು ಜಮಖಂಡಿ ತಾಲೂಕಿನ ಕುಂಬಾರಹಳ್ಳ ನಿವಾಸಿಯಾಗಿದ್ದು, ಅವರ ಮದುವೆ ಪೂಜಾ ಎಂಬ ಯುವತಿಗೆ ನಡೆಯುತ್ತಿತ್ತು.
ವಿವಾಹದ ಪ್ರಮುಖ ಕ್ಷಣಗಳಲ್ಲಿ ಒಂದಾದ ತಾಳಿ ಕಟ್ಟುವ ಸಮಯ ಮುಗಿದ ಕೇವಲ ಕೆಲವೇ ಸೆಕೆಂಡುಗಳಲ್ಲಿ ಅವರು ಕುಸಿದುಬಿದ್ದ ದೃಶ್ಯವು ಮಂಟಪದಲ್ಲಿದ್ದ ಕುಟುಂಬಸ್ಥರು, ಸ್ನೇಹಿತರು ಮತ್ತು ಅತಿಥಿಗಳೆಲ್ಲರನ್ನೂ ಬೆಚ್ಚಿ ಬೀಳಿಸಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ವಧು ಪೂಜಾ ಹಾಗೂ ಕುಟುಂಬಸ್ಥರಿಗೆ ಈ ದುರ್ಘಟನೆ ಭಾರಿ ಆಘಾತವನ್ನುಂಟುಮಾಡಿದ್ದು, ಶುಭ ಕಾರ್ಯದ ಸಂದರ್ಭದಲ್ಲಿ ಇಂತಹ ದುರಂತ ಸಂಭವಿಸಬಹುದೆಂದು ಯಾರೂ ಊಹಿಸಲಾರರು ಎಂಬ ವಾಸ್ತವವನ್ನು ಈ ಘಟನೆ ಮತ್ತೆ ಒತ್ತಿ ಹೇಳಿದೆ.














