ದಾವಣಗೆರೆ: ಹೊನ್ನಾಳಿ ತಾಲೂಕಿನ ಕಲಾತ್ಮಕ ಪ್ರತಿಭೆ ಹೊಂದಿರುವ ಬಾಲಕನೊಬ್ಬನಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪತ್ರ ಸಿಕ್ಕಿದೆ ಎಂಬುದು ತಾಲೂಕಿನಲ್ಲಷ್ಟೇ ಅಲ್ಲ, ರಾಜ್ಯದ ಮಟ್ಟದಲ್ಲೂ ಹೆಮ್ಮೆ ಪಡುವಂತಹ ವಿಷಯವಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ವಿದ್ಯಾರ್ಥಿ ಅಮೋಘ್ ಎಚ್.ಪಿ. ಇತ್ತೀಚೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಂತಹ ಚಿತ್ರವೊಂದನ್ನು ಪ್ರಧಾನಿ ಮೋದಿಗೆ ಕಳುಹಿಸಿದ್ದರು. ಪರಿಸರ ಸಂರಕ್ಷಣೆ ಕುರಿತು ತನ್ನ ಕಲಾತ್ಮಕ ಚಿಂತನೆಗಳನ್ನು ಚಿತ್ರ ರೂಪದಲ್ಲಿ ಪ್ರದರ್ಶಿಸಿದ ಅಮೋಘ್ ಚಿತ್ರವನ್ನು ಪ್ರಧಾನಿ ಮೋದಿ ಗುರುತಿಸಿ, ಪ್ರಶಂಸೆಯ ಪತ್ರವನ್ನು ಅವರ ವಿಳಾಸಕ್ಕೆ ಕಳುಹಿಸಿದ್ದಾರೆ. ಪ್ರಧಾನಮಂತ್ರಿಯಿಂದ ಈ ರೀತಿಯ ಮೆಚ್ಚುಗೆ ದೊರಕಿದಂತೇ, ಅಮೋಘ್ ಹಾಗೂ ಆತನ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಅಮೋಘ್, ದಾವಣಗೆರೆ ನಗರದ ಭರತ್ ಹಾಗೂ ಚಂದನ ಜಿ.ಪಿ. ದಂಪತಿಯ ಪುತ್ರ ಆಗಿದ್ದು, ಅವನು ಶಾಲಾ ಮಟ್ಟದಿಂದಲೇ ಚಿತ್ರಕಲೆಯ ಮೇಲೆ ವಿಶೇಷ ಆಸಕ್ತಿ ಹೊಂದಿದ್ದಾನೆ.
“ನಾನು ಬರೆದ ಚಿತ್ರದಲ್ಲಿ ಪರಿಸರದ ಮಹತ್ವ ಮತ್ತು ನಾವು ಪ್ರಕೃತಿಯನ್ನು ಹೇಗೆ ರಕ್ಷಿಸಬೇಕು ಎಂಬ ಸಂದೇಶವನ್ನು ಒತ್ತಿ ಹೇಳಿದ್ದೆ. ನನ್ನ ಈ ಪ್ರಯತ್ನಕ್ಕೆ ಶಿಕ್ಷಕರು ಹಾಗೂ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಅವರ ಸಹಕಾರದಿಂದಲೇ ಈ ಸಾಧನೆ ಸಾಧ್ಯವಾಯಿತು” ಎಂದು ಅಮೋಘ್ ಮಾತುಗಳಲ್ಲಿ ಅಭಿಮಾನ ವ್ಯಕ್ತಪಡಿಸಿದನು.
ಅಮೋಘ್ ಕಲೆಯ ಶೈಲಿ, ಪ್ರಾಮಾಣಿಕ ಸಂದೇಶ ಹಾಗೂ ಮನೋಹರ ಚಿತ್ರಣ ಪ್ರಧಾನಮಂತ್ರಿಯವರ ಗಮನ ಸೆಳೆದಿದ್ದು, ಪ್ರಧಾನಮಂತ್ರಿ ಕಚೇರಿ ಇದನ್ನು ಗಮನಿಸಿ, ವೈಯಕ್ತಿಕವಾಗಿ ಮೆಚ್ಚುಗೆ ಪತ್ರವನ್ನು ಕಳುಹಿಸಿ ಗೌರವಿಸಿದ್ದಾರೆ.
ಅಮೋಘ್ ಅವರ ಸಾಧನೆಗೆ ಶಾಲೆಯ ಶಿಕ್ಷಕರು, ಸ್ಥಳೀಯ ಸಾರ್ವಜನಿಕರು, ಕುಟುಂಬಸ್ಥರು ತೀವ್ರ ಸಂತೋಷ ವ್ಯಕ್ತಪಡಿಸಿದ್ದು, ಇವನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಿ ದೇಶದ ಹೆಮ್ಮೆ ಹೆಚ್ಚಿಸುತ್ತಾನೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.














