ಮನೆ ಸುದ್ದಿ ಜಾಲ ಆಂಧ್ರದ ಕರ್ನೂಲ್ ಬಳಿ ಭೀಕರ ಕಾರು ಅಪಘಾತ : ಪ್ರವಾಸಕ್ಕೆ ತೆರಳಿದ್ದ ತುಮಕೂರಿನ ಮೂವರು ಸ್ಥಳದಲ್ಲೇ...

ಆಂಧ್ರದ ಕರ್ನೂಲ್ ಬಳಿ ಭೀಕರ ಕಾರು ಅಪಘಾತ : ಪ್ರವಾಸಕ್ಕೆ ತೆರಳಿದ್ದ ತುಮಕೂರಿನ ಮೂವರು ಸ್ಥಳದಲ್ಲೇ ಸಾವು

0

ತುಮಕೂರು: ಆಂಧ್ರಪ್ರದೇಶದ ಕಡೆಗೆ ಪ್ರವಾಸಕ್ಕೆ ತೆರಳಿದ್ದ ತುಮಕೂರಿನ ಮೂವರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಆಂಧ್ರದ ಕರ್ನೂಲ್ ಬಳಿ ನಡೆದಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಗ್ರಾಮದ ನಿವಾಸಿಗಳಾದ ನವೀನ್ (48), ಸಂತೋಷ್ (35) ಮತ್ತು ಲೋಕೇಶ್ (38) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಮೃತರು ಸ್ನೇಹಿತರಾಗಿದ್ದು, ಪ್ರವಾಸಕ್ಕಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದರು.

ಘಟನೆ ವಿವರಗಳ ಪ್ರಕಾರ, ನವೀನ್, ಸಂತೋಷ್, ಲೋಕೇಶ್ ಸೇರಿ ಒಟ್ಟು 6 ಮಂದಿ ಆಂಧ್ರಪ್ರದೇಶದ ಕಡೆಗೆ ಪ್ರವಾಸಕ್ಕೆ ತೆರಳಿದ್ದರು. ಎಲ್ಲರೂ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕರ್ನೂಲ್ ರಸ್ತೆಯಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ನವೀನ್, ಸಂತೋಷ್ ಹಾಗೂ ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕರ್ನೂಲ್ ಪೊಲೀಸರು ತಿಳಿಸಿದ್ದಾರೆ.

ಇನ್ನುಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು ಹಾಗೂ ವಾಹನ ಸವಾರರು ಪರಿಹಾರ ಕಾರ್ಯಕ್ಕೆ ಧಾವಿಸಿದರು. ಕರ್ನೂಲ್ ಪೊಲೀಸರು ಕೂಡ ತ್ವರಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಮತ್ತು ಸಂಬಂಧಪಟ್ಟ ಕುಟುಂಬಗಳಿಗೆ ಸುದ್ದಿ ನೀಡಲಾಗಿದೆ. ಕರ್ನೂಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.