ಮನೆ ರಾಜ್ಯ ಕುವೆಂಪುಗೆ ಅಪಮಾನ ಮಾಡಿದ್ದು ಸಿದ್ದರಾಮಯ್ಯ: ಸಚಿವ ಬಿ.ಸಿ. ನಾಗೇಶ ಆರೋಪ

ಕುವೆಂಪುಗೆ ಅಪಮಾನ ಮಾಡಿದ್ದು ಸಿದ್ದರಾಮಯ್ಯ: ಸಚಿವ ಬಿ.ಸಿ. ನಾಗೇಶ ಆರೋಪ

0

ಶಿವಮೊಗ್ಗ(Shivamogga): ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಸಿದ್ದರಾಮಯ್ಯ. ಹೀಗಾಗಿ ಮೊದಲು ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಯಲಿ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ಅವರ ನಾಡಗೀತೆ ತಿರುಚಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ. ಅವರು ಆಗ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತಿರುಚಿದ ನಾಡಗೀತೆ ಫಾರ್ವರ್ಡ್ ಮಾಡಿದ್ದ ರೋಹಿತ್ ಚಕ್ರತೀರ್ಥರ ಮೇಲೆ ಕೇಸ್ ಹಾಕಿದ್ದರು. ಅದಕ್ಕೂ ಅವರದ್ದೇ ಸರ್ಕಾರ ಬಿ ರಿಪೋರ್ಟ್ ಕೊಟ್ಟಿತ್ತು. ಹೀಗಾಗಿ ನೈತಿಕತೆ ಇದ್ದರೆ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿ ಮಾತಾಡಲಿ ಎಂದು ಸವಾಲು ಹಾಕಿದರು.

ಕುವೆಂಪು ಅವರ ರಾಮಾಯಣ ದರ್ಶನಂ ಪಾಠವನ್ನು ತೆಗೆದು ಹಾಕಿ ಅವಮಾನ ಮಾಡಿದ್ದು ಅವರೇ (ಸಿದ್ದರಾಮಯ್ಯ). ಬರಗೂರ ರಾಮಚಂದ್ರಪ್ಪ ಸಮಿತಿ ಅವಧಿಯಲ್ಲಿನ ಪಠ್ಯಕ್ರಮ ಪರಿಷ್ಕರಣೆ ವಿಚಾರವನ್ನು ನಾವು ಈಗ ಸಾರ್ವಜನಿಕರ ಮುಂದೆ ಇಡುತ್ತೇವೆ ಎಂದಾಗ ಈಗ ಬೇಡದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ವೈಚಾರಿಕವಾಗಿ ಮಾತನಾಡಲು ಏನೂ ಇಲ್ಲ. ಹಾಗಾಗಿ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕಂಡು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಜನರನ್ನು ದಾರಿ ತಪ್ಪಿಸಲು ಏನೇನೊ ಹೇಳುತ್ತಿದ್ದಾರೆ ಎಂದು ಸಚಿವ ನಾಗೇಶ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.