ಮಂಡ್ಯ: ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ -೨ ಮೇ ೨೬ ರಿಂದ ಜೂನ್ ೨ ರವರೆಗೆ ನಡೆಯಲಿದ್ದು, ಪರೀಕ್ಷೆಯು ಯಾವುದೇ ಲೋಪದೋಷವಿಲ್ಲದೆ ಸುಗಮವಾಗಿ ನಡೆಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಅಧಿಕಾರಿಗಳಿಗೆ ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ೨೦೨೪-೨೫ ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ -೨ ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ನಡೆದ ಎಸ್‌ಎಸ್.ಎಲ್.ಸಿ. ಪರೀಕ್ಷೆ-೧ ಅಥವಾ ಅನುತ್ತೀರ್ಣರಾದ ಒಟ್ಟು ೬೦೮೨ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ೬೨೭ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೬೬೬೯ ವಿದ್ಯಾರ್ಥಿಗಳು ಎಸ್‌ಎಸ್.ಎಲ್.ಸಿ ಪರೀಕ್ಷೆ-೨ ಬರೆಯಲು ಹೆಸರು ನೋಂದಣಿಗೊಂಡಿರುತ್ತಾರೆ ಎಂದರು.
ಜಿಲ್ಲೆಯ ೨೦ ಪ್ರೌಢಶಾಲೆಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸಿದ್ದು, ೨೦ ಪರೀಕ್ಷಾ ಕೇಂದ್ರಗಳಿಗೂ ಓರ್ವ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಪರೀಕ್ಷೆಯ ಮುಖ್ಯ ಅಧೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ ಎಂದರು. ಪ್ರತಿ ಪರೀಕ್ಷಾ ಕೇಂದ್ರಗಳಿಗೂ ಓರ್ವ ಪೇಪರ್ ಕಸ್ಟೋಡಿಯನ್ ಗಳನ್ನು ನೇಮಕ ಮಾಡಲಾಗಿದ್ದು, ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಗಳನ್ನು ಅಳವಡಿಸಲಾಗಿದೆ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಹಂತದ ವೆಬ್ ಕಾಸ್ಟಿಂಗ್ ಮಾಡಿ ವೀಕ್ಷಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಹಂತದಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಸಿ.ಸಿ.ಟಿ.ವಿ ವೀಕ್ಷಿಸಿ, ವರದಿ ಸಲ್ಲಿಸಲು ಕ್ಷೇತ್ರಶಿಕ್ಷಣಾಧಿಕಾರಿಗಳ ಮುಖಾಂತರ ಓರ್ವ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ಹಾಗೂ ಸಿಬ್ಬಂದಿಗಳನ್ನು ತಂಡವನ್ನಾಗಿ ರಚಿಸಲಾಗಿದೆ ಎಂದರು. ಬ್ಲಾಕ್ ಹಂತದಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಕೊಠಡಿ ಮೇಲ್ವಿಚಾರಕರನ್ನು ನೇಮಿಸಿದ್ದು, ಪ್ರತಿ ಬ್ಲಾಕ್ ಗಳಿಗೆ ಓರ್ವ ಬ್ಲಾಕ್ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಓರ್ವ ಮೊಬೈಲ್ ಸ್ವಾಧೀನಾಧಿಕಾರಿಯನ್ನು ಮತ್ತು ಓರ್ವ ಸ್ಥಾನಿಕ ಜಾಗೃತ ದಳ ಅಧಿಕಾರಿಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಹಂತದಲ್ಲಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು. ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಹಾಗೂ ಪರೀಕ್ಷಾ ಕೇಂದ್ರಗಳ ಹತ್ತಿರದಲ್ಲಿರುವ ಜೆರಾಕ್ಸ್ ಮತ್ತು ಸೈಬರ್ ಕೇಂದ್ರಗಳನ್ನು ಪರೀಕ್ಷೆ ಸಮಯದಲ್ಲಿ ಮುಚ್ಚಿಸಲು ಆದೇಶ ಹೊರಡಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳ ಮೂಲಭೂತ ಸೌಕರ್ಯಗಳ ಬಗ್ಗೆ ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಚೆಕ್ ಲಿಸ್ಟ್ ನೀಡಲಾಗಿದ್ದು, ಸದರಿ ಚೆಕ್ ಲಿಸ್ಟ್ ನಲ್ಲಿ ಮಾಹಿತಿಯನ್ನು ಪಡೆಯಲಾಗಿದೆ. ಪರೀಕ್ಷಾ ದಿನಗಳಂದು ನಿರಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ಲೋಪವಾಗದಂತೆ ಚೆಸ್ಕಾಂ ಇಲಾಖೆ ಅವರು ಗಮನವಹಿಸಿ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅನುತ್ತಿರ್ಣರಾಗಲು, ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡದಿರಲು ಹಾಗೂ ಶಾಲೆ ಬಿಡಲು ಕಾರಣಗಳೇನು ಎಂದು ಪರಿಶೀಲಿಸಿ, ಮುಂದಿನ ವರ್ಷದಲ್ಲಿ ಉತ್ತಮ ಫಲಿತಾಂಶ ತರಲು ಯೋಜನೆಗಳನ್ನು ತಯಾರಿಸಿ ಎಂದರು. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿರುವ ಶಾಲೆಯ ಪ್ರಾಂಶುಪಾಲರು ಶಾಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಮನಸ್ಥಿತಿ ಕುರಿತು ವರದಿ ತಯಾರಿಸಿ ಮುಂದಿನ ಸಭೆಯಲ್ಲಿ ಹಾಜರಾಗುವುದು ಕಡ್ಡಾಯ ಎಂದು ತಿಳಿಸಿದರು.
ಕಳೆದ ಬಾರಿಯಗಿಂತಲೂ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದೊರೆತಿರುವುದು ಶ್ಲಾಘನೀಯವಾದರೂ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಿರ್ಣರಾಗುವಂತ ಕೆಲಸ ನಿರ್ವಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ನಿರ್ವಹಿಸಿ ಎಂದರು. ಈ ಬಾರಿ ಜಿಲ್ಲೆಯಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಉತ್ತೀರ್ಣರಾಗಲು ತರಗತಿಗಳನ್ನು ನಡೆಸಲಾಗಿದೆ, ನೂರಕ್ಕೆ ನೂರು ಫಲಿತಾಂಶ ತರುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶಾಲೆ ಪ್ರಾರಂಭವಾದ ನಂತರ ಜಿಲ್ಲೆಯ ಪ್ರತಿಯೊಂದು ಶಾಲೆಯಲ್ಲಿ ಪೋಷಕರ ಸಭೆಗಳನ್ನು ನಡೆಸಿ ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣ ಹಾಗೂ ಇತರೆ ಚಟುವಟಿಕೆಗಳಿಂದ ದೂರವಿರಲು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಓದಿನ ಮಹತ್ವ ಕುರಿತು ಅರಿವು ಮೂಡಿಸಿ ಎಂದು ತಿಳಿಸಿದರು.
ಮುಂದಿನ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಗಳಲ್ಲಿ ಜಿಲ್ಲೆಯಲ್ಲಿ ನೂರಕ್ಕೆ ೭೫ ರಿಂದ ೮೦ ಶೇಕಡಾವಾರು ಫಲಿತಾಂಶ ತರುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಡಿ.ಡಿ.ಪಿ.ಐ ಹೆಚ್. ಶಿವರಾಮೇಗೌಡ, ಶಿಕ್ಷಣಾಧಿಕಾರಿ ಚಂದ್ರಕಾಂತ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್. ಸಿ. ಹೆಚ್ ಅಧಿಕಾರಿ ಡಾ. ಕೆ.ಪಿ ಅಶ್ವತ್, ಬಿ. ಇ. ಓ ಗಳಾದ ಮಹದೇವ, ಸೌಭಾಗ್ಯವತಿ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.














