ಮನೆ ರಾಜ್ಯ ಬೆಂಗಳೂರು ಮಳೆ ಸಮಸ್ಯೆ: ‘ಬಿಜೆಪಿ ಅವಧಿಯಲ್ಲಿ ನಗರ ತೇಲುತ್ತಿತ್ತು’ : ಡಿಕೆ ಸುರೇಶ್ ಕಿಡಿ

ಬೆಂಗಳೂರು ಮಳೆ ಸಮಸ್ಯೆ: ‘ಬಿಜೆಪಿ ಅವಧಿಯಲ್ಲಿ ನಗರ ತೇಲುತ್ತಿತ್ತು’ : ಡಿಕೆ ಸುರೇಶ್ ಕಿಡಿ

0

ಬೆಂಗಳೂರು: ಬಿಜೆಪಿ ಆಡಳಿತದ ಅವಧಿಯಲ್ಲಿ ಮಳೆ ಬಂದರೆ ಬೆಂಗಳೂರು ತೇಲುತ್ತಿದ್ದಂತೆ ಆಗುತ್ತಿತ್ತು ಎಂದು ಮಾಜಿ ಸಂಸದ ಡಿಕೆ ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಳೆಯಾದರೆ ಉಂಟಾಗುವ ಜಲಾವೃತದ ಸಮಸ್ಯೆ ಕುರಿತು ಬಿಜೆಪಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ಬಿಜೆಪಿ ಅವಧಿಯಲ್ಲಿ ಮಳೆ ಬಂದ್ರೆ ಬೆಂಗಳೂರು ನದಿಯಾಗಿತ್ತು. ಅವರಿಗೆ ಅದು ಮರೆತು ಹೋಗಿದೆಯೇನೋ ಅನಿಸುತ್ತೆ. ಪ್ರಕೃತಿ ಎದುರು ಯಾರೂ ಏನು ಮಾಡಕ್ಕೆ ಆಗಲ್ಲ. ಆದರೆ ಬೃಹತ್ ನಗರವನ್ನೇ ಲೂಟಿ ಮಾಡಿ ಹೋಗಿದ್ರು. ಅದನ್ನ ಸರಿಪಡಿಸಲು ನಮ್ಮ ಸರ್ಕಾರಕ್ಕೆ ಸಮಯ ಬೇಕು.”

ಸಿಎಂ, ಡಿಸಿಎಂ ಅವರು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮುಂದಾಗಿದ್ದಾರೆ. ರಾಜಕಾಲುವೆ ಮೇಲೆ ಮನೆ ಕಟ್ಟಿದ್ದಾರೆ. ಅದಕ್ಕೆ ಯಾವುದೇ ನಿಯಮ ಇಲ್ಲ. ಇದಕ್ಕೆ ಬಿಜೆಪಿ ಕಡಿವಾಣ ಹಾಕಿರಲಿಲ್ಲ. ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ. ಇದಕ್ಕಾಗಿ ಕಾನೂನು ಮಾಡಲು ಚಿಂತನೆ ಮಾಡಲಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಖಂಡಿತ ಮುಂದಿನ ದಿನಗಳಲ್ಲಿ ಸಿಗಲಿದೆ. ಕಳೆದ ಬಾರಿ ಎಲ್ಲೆಲ್ಲಿ ಸಮಸ್ಯೆ ಆಗಿತ್ತು, ಈಗ ಅದು ಸರಿ ಹೋಗಿದೆ. ಎಲ್ಲಿ ಬಿಜೆಪಿ ಶಾಸಕರು ಸತತವಾಗಿ ಗೆದ್ದು ಬರುತ್ತಿದ್ದಾರೆ ಅಲ್ಲಿ ಏನು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಅವರು ಹೇಳಬೇಕು ಎಂದು ಹೇಳಿದರು. ಈಗ ಏನೇ ಅನಾಹುತ ಆಗುತ್ತಿದ್ದರೂ ಬಿಜೆಪಿ ಅವರು ಸತತವಾಗಿ ಗೆದ್ದು ಬರುತ್ತಿರುವ ಕ್ಷೇತ್ರದಲ್ಲಿ ಅವ್ಯವಸ್ಥೆ ಆಗುತ್ತಿದೆ. ಅದಕ್ಕೆ ಏನು ಕಾರಣ ಎಂದು ಬಿಜೆಪಿ ಅವರು ಹೇಳಲಿ ಎಂದು ಆಗ್ರಹಿಸಿದರು.

ಸುಮಾರು 2 ಸಾವಿರ ಕೋಟಿ ರಾಜಕಾಲುವೆ ಸರಿ ಮಾಡಲು ಹಣ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ. ಏನೇ ಮಾಡಬೇಕಾದರೂ ಆರ್ಥಿಕ ವ್ಯವಸ್ಥೆ ನೋಡಿಕೊಂಡು ಮಾಡಬೇಕು. ಆ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪಡಿಸಲು ಸಿಎಂ ಅವರು ಮುಂದಿನ 3-4 ವರ್ಷಗಳ ಕಾಲ ಅನುದಾನ ಕೊಡುತ್ತಾರೆ. ಡಿಪಿಆರ್ ರೆಡಿ ಆಗುತ್ತಿದೆ. ಅದೆಲ್ಲ ಆದ ಮೇಲೆ ಬೆಂಗಳೂರಿಗೆ ಹೊಸ ರೂಪ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.