ತುಮಕೂರು : ತುಮಕೂರು ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಭೀಕರ ದುರಂತದಲ್ಲಿ ಇಬ್ಬರು ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಲೊರಸ್ ಬಯೋ ಎಂಬ ಖಾಸಗಿ ರಾಸಾಯನಿಕ ತಯಾರಿಕಾ ಕಂಪನಿಯಲ್ಲಿ ಕಿಮಿಕಲ್ ಸಂಪ್ ಕ್ಲೀನಿಂಗ್ ಕೆಲಸದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೃತರಾದ ಕಾರ್ಮಿಕರನ್ನು ಮಧುಗಿರಿ ತಾಲೂಕಿನ ಮಾದೋಡು ಗ್ರಾಮದ ಪ್ರತಾಪ್ (23) ಹಾಗೂ ಶಿರಾ ತಾಲೂಕಿನ ತರೂರು ಗ್ರಾಮದ ವೆಂಕಟೇಶ್ (32) ಎಂದು ಗುರುತಿಸಲಾಗಿದೆ. ಸಂಪ್ ಸ್ವಚ್ಛಗೊಳಿಸಲು ನಾಲ್ವರು ಕಾರ್ಮಿಕರು ಒಳಗೆ ಇಳಿದಿದ್ದಾಗ ಉಸಿರಾಟದ ತೊಂದರೆ ಉಂಟಾಗಿ ಈ ದುರಂತ ಸಂಭವಿಸಿದೆ. ಶ್ವಾಸಕೋಶಕ್ಕೆ ವಿಷಪೂರಿತ ಅನಿಲ ನುಗ್ಗಿದ ಶಂಕೆ ವ್ಯಕ್ತವಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತ್ತಿಬ್ಬರು ಕಾರ್ಮಿಕರು – ಶಿರಾ ತಾಲೂಕಿನ ತರೂರು ಗ್ರಾಮದ ಮಂಜಣ್ಣ ಮತ್ತು ಯುವರಾಜ್ – ಗಂಭೀರವಾಗಿ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














