ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಕುಟುಂಬದವರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮಧ್ಯೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಪರಮೇಶ್ವರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದರು.“ಪರಮೇಶ್ವರ್ ಅವರು ರನ್ಯಾ ಮದುವೆ ಸಂಬಂಧ 15-20 ಲಕ್ಷ ರೂ. ಗಿಫ್ಟ್ ಕೊಟ್ಟಿರಬಹುದು. ನಾನು ಅವರೊಂದಿಗೆ ಮಾತುಕತೆ ನಡೆಸಿದ್ದೇನೆ” ಎಂದು ತಿಳಿಸಿದರು. ಇದರಲ್ಲಿ ಅಸಾಧಾರಣ ಏನೂ ಇಲ್ಲ ಎಂಬ ಎಂಬ ಅಂಶವನ್ನು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಪರಮೇಶ್ವರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ ಡಿಕೆಶಿ, “ಅವರು ಆರೋಗ್ಯವಾಗಿದ್ದಾರೆ. ಮತ್ತೆ ಕ್ಯಾಬಿನೆಟ್ ಸಭೆಗಳಿಗೆ ಹಾಜರಾಗಲಿದ್ದಾರೆ. ಅವರಿಗೆ ಸಾಕಷ್ಟು ಜವಾಬ್ದಾರಿಯಿದೆ. ಅವರು ಗೌರವಾನ್ವಿತ ವ್ಯಕ್ತಿ. ನಾನು ಅವರ ಜೊತೆ ನಿಂತಿದ್ದೇನೆ” ಎಂದು ತಿಳಿಸಿದರು.
ಡಿಕೆಶಿ ಮುಂದುವರಿದು, “ಯಾರಾದರೂ ತಪ್ಪು ಮಾಡಿದ್ದರೆ, ಅವರ ವಿರುದ್ಧ ಕ್ರಮ ಜರುಗಿಸಲೇಬೇಕು. ರನ್ಯಾ ತಪ್ಪು ಮಾಡಿದರೂ ಕ್ರಮ ಆಗಲಿ. ಆದರೆ ಎಲ್ಲದರ ಹಿಂದೆ ರಾಜಕೀಯ ಪ್ರೇರಣೆಯ ಸುಳಿವು ಕಾಣುತ್ತಿದೆ” ಎಂದು ಹೇಳಿದರು.
ಇಡಿ ದಾಳಿ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬುಧವಾರ ಸುದ್ದಿಗೋಷ್ಠಿ ನಡೆಸಿ, ರನ್ಯಾರಾವ್ ವಿದೇಶದಿಂದ ಚಿನ್ನ ತಂದು ಹಲವು ಪ್ರಮುಖರಿಗೆ ನೀಡಿರುವ ಮಾಹಿತಿಯಿದೆ. ಈ ಹಣ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದ ಬಗ್ಗೆ ಇಡಿ ಮಾಹಿತಿ ಸಂಗ್ರಹಿಸಿರಬಹುದು ಎಂದು ಆರೋಪಿಸಿದ್ದರು.














