ಮನೆ ಸುದ್ದಿ ಜಾಲ ತಾಳಿ ಕಟ್ಟುವಾಗಲೇ ‘ನಂಗೆ ಮದುವೆ ಬೇಡ’ ಎಂದ ವಧು : ವರ, ಕುಟುಂಬ ಶಾಕ್!

ತಾಳಿ ಕಟ್ಟುವಾಗಲೇ ‘ನಂಗೆ ಮದುವೆ ಬೇಡ’ ಎಂದ ವಧು : ವರ, ಕುಟುಂಬ ಶಾಕ್!

0

ಹಾಸನ: ಚಿತ್ರಕಥೆ ಹೀಗಿರಬಹುದೆಂದು ಯಾರು ಊಹಿಸಿದ್ದರು? ಹಾಸನದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯೊಂದರಲ್ಲಿ ತಾಳಿ ಕಟ್ಟುವ ಕ್ಷಣದಲ್ಲಿ ವಧುವೇ ಮದುವೆಗೆ ನಿರಾಕರಣೆ ಹೇಳಿದ ನಾಟಕೀಯ ಘಟನೆ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಹಾಸನ ಜಿಲ್ಲೆಯ ಬೂವನಹಳ್ಳಿ ಗ್ರಾಮದ ಪಲ್ಲವಿ ಎಂಬವರ ಮದುವೆ ಆಲೂರು ತಾಲ್ಲೂಕಿನ ವೇಣುಗೋಪಾಲ ಜಿ. ಅವರೊಂದಿಗೆ ನಿಶ್ಚಿತವಾಗಿತ್ತು. ಮದುವೆ ಸಂಭ್ರಮ ಸಡಗರದಿಂದ ನಡೆಯುತ್ತಿತ್ತು. ಆದರೆ ತಾಳಿ ಕಟ್ಟಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಪಲ್ಲವಿಗೆ ಒಂದು ಕರೆ ಬಂತು. ಆ ಕರೆ ಬಂದ ನಂತರವೇ ನಡೆದ ಬೆಳವಣಿಗೆಯು ಎಲ್ಲರ ತಲೆ ತಿರುಗುವಂತೆ ಮಾಡಿತು.

ಕರೆ ನಂತರ ವಧು ತಾನೊಬ್ಬ ಬೇರೆ ಯುವಕನನ್ನು ಪ್ರೀತಿಸುತ್ತಿದ್ದೇನೆ, ಈ ಮದುವೆ ನನಗೆ ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಪಲ್ಲವಿ ತಾಳ್ಮೆಯಿಂದ ತಿರಸ್ಕರಿಸುವ ಬದಲು, ವೇದಿಕೆಯಲ್ಲಿಯೇ ಮದುವೆಯನ್ನು ನಿಲ್ಲಿಸುವಂತೆ ಹಠ ಹಿಡಿದಳು. ಈ ಸಂದರ್ಭದಲ್ಲಿ ವರ ಮತ್ತು ಅವರ ಕುಟುಂಬಸ್ಥರು ಶಾಕ್‌ಗೆ ಒಳಗಾದರು.

ತಕ್ಷಣವೇ ಪಲ್ಲವಿ ಕೊಠಡಿಗೆ ಹೋಗ ಬಾಗಿಲು ಹಾಕಿಕೊಂಡಿದ್ದಾಳೆ. ಪಲ್ಲವಿಯ ಮನವೊಲಿಸಲು ಪೋಷಕರು ಶತಾಯಗತಾಯ ಪ್ರಯತ್ನಪಟ್ಟಿದ್ದಾರೆ. ವಿಚಾರ ತಿಳಿದು ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ. ಪೋಷಕರ ಮನವೊಲಿಕೆಗೂ ಕ್ಯಾರೇ ಎನ್ನದ ಯುವತಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾಳೆ. ಯುವತಿ ಹಠವನ್ನು ನೋಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ವೇಣುಗೋಪಾಲ ನನಗೂ ಈ ಮದುವೆ ಬೇಡ ಎಂದು ಹೇಳಿದ್ದಾರೆ.

ಪಲ್ಲವಿ ಸ್ನಾತಕೋತ್ತರ ಪದವಿ ಓದಿದ್ದು ಸದ್ಯ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಪ್ರೀತಿಸುವ ಹುಡುಗನ ಬಗ್ಗೆ ಸದ್ಯ ಯಾವುದೇ ವಿವರ ಲಭ್ಯವಾಗಿಲ್ಲ.

ಕಲ್ಯಾಣಮಂಟಪಕ್ಕೆ ವಧು-ವರನ ಕಡೆಯ ನೂರಾರು ಮಂದಿ ಆಗಮಿಸಿದ್ದರು. ಕಡೆ ಗಳಿಗೆಯಲ್ಲಿ ಮದುವೆ ನಿಂತು ಹೋಗಿದ್ದಕ್ಕೆ ವಧುವಿನ ಪೋಷಕರು ಕಣ್ಣೀರಿಟ್ಟಿದ್ದಾರೆ.