ಕೋಲ್ಕತ್ತಾ: “ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ” ಎಂಬ ಎಳವೆಯ ಪ್ರಾಮಾಣಿಕ ಅಳಲು ಮಾತ್ರವಲ್ಲ, ಇದು ಒಂದು ತಾಯಿ ಕಳೆದುಕೊಂಡ ಮಗನ ಕೊನೆಯ ವಾಕ್ಯ. ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ನಡೆದಿರುವ ಹೃದಯವಿದ್ರಾವಕ ಘಟನೆ ಈಗ ಬೆಳಕಿಗೆ ಬಂದಿದೆ.
13 ವರ್ಷದ ಕೃಷ್ಣೇಂದು ದಾಸ್ ಎಂಬ 7ನೇ ತರಗತಿಯ ವಿದ್ಯಾರ್ಥಿ ಕೇವಲ ಒಂದು ತಪ್ಪು ಅನುಮಾನದಿಂದ, ಸಾರ್ವಜನಿಕ ಅವಮಾನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃಷ್ಣೇಂದು ಪನ್ಸ್ಕುರಾದ ಬಕುಲ್ಡಾ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.
ಕಳೆದ ಭಾನುವಾರ ತಿಂಡಿ ಖರೀದಿಸಲೆಂದು ಬಾಲಕ ಅಂಗಡಿಗೆ ಹೋಗಿದ್ದ. ಅಂಗಡಿಯ ಬಳಿ ಹೋದ ಬಾಲಕ ಚಿಪ್ಸ್ ಕೊಡುವಂತೆ ಮಾಲೀಕನ ಬಳಿ ಕೇಳಿದ್ದಾನೆ. ಆದರೆ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅಂಗಡಿಯಲ್ಲಿ ಯಾರು ಇಲ್ಲ ಎಂದುಕೊಂಡು ಹಾಗೆಯೇ ಹೊರಟಿದ್ದ. ಆಗ ಕಾಲು ಬಳಿ ಬಿದ್ದಿದ್ದ ಚಿಪ್ಸ್ ಪ್ಯಾಕೆಟ್‌ಗಳನ್ನು ಎತ್ತಿಕೊಂಡಿದ್ದ. ಇದನ್ನು ನೋಡಿದ್ದೇ ತಡ ಮಾಲೀಕ ಸೈಕಲ್‌ನಲ್ಲಿ ಆತನನ್ನು ಬೆನ್ನಟ್ಟಿಸಿಕೊಂಡು ಹೋಗಿದ್ದಾನೆ. ಆಗ ಬಾಲಕ ಮಾಲೀಕನಿಗೆ ಕ್ಷಮೆ ಕೇಳಿ, 15 ರೂ. ಚಿಪ್ಸ್ ಪ್ಯಾಕೆಟ್‌ಗೆ 20 ರೂ. ನೀಡಿದ್ದ. ಬಳಿಕ ಬಾಲಕನನ್ನು ಅಂಗಡಿಗೆ ಎಳೆದುಕೊಂಡ ಹೋದ ಮಾಲೀಕ, ಇನ್ನುಳಿದ ಚಿಲ್ಲರೆ ಹಣವನ್ನು ನೀಡಿದ್ದಾನೆ. ಆದರೂ ಕೂಡ ಬಾಲಕನನ್ನು ಬಿಡದೇ ಸಾರ್ವಜನಿಕರ ಮುಂದೆ ಎಳೆದೊಯ್ದು, ಕಪಾಳಮೋಕ್ಷ ಮಾಡಿ ರಸ್ತೆಯಲ್ಲಿಯೇ ಅವಮಾನಿಸಿದ್ದ. ಜೊತೆಗೆ ಕಿವಿ ಹಿಡಿದು ಕ್ಷಮೆಯಾಚಿಸುವಂತೆ ತಿಳಿಸಿದ್ದ ಎಂದು ಮೂಲಗಳು ತಿಳಿಸಿವೆ.
ಮಾಲೀಕನ ಅವಮಾನಕಾರಿ ವರ್ತನೆ – ಸಾರ್ವಜನಿಕರ ಮುಂದೆ ಬಾಲಕನನ್ನು ಎಳೆದೊಯ್ದು, ಕಪಾಳಮೋಕ್ಷ ಮಾಡಿದ್ದು, ಆತನಿಂದ ಕ್ಷಮೆ ಕೇಳುವಂತೆ ಕಿವಿ ಹಿಡಿಯಲು ಮುಂದಾದ ಘಟನೆ – ಬಾಲಕನ ಮನಸ್ಸಿನಲ್ಲಿ ನಿಜಕ್ಕೂ ಆಘಾತವನ್ನು ಉಂಟುಮಾಡಿದೆ. ಇಷ್ಟಕ್ಕೂ ತಾಯಿ ಕೂಡ ತನ್ನ ಮಗನನ್ನು ಗದರಿಸಿದ್ದು, ಬಾಲಕನ ಮೇಲೆ ಇನ್ನಷ್ಟು ಮಾನಸಿಕ ಒತ್ತಡ ಹೇರಿದೆ. ತಕ್ಷಣವೇ ಕೋಣೆಗೆ ಹೋಗಿ “ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ” ಎಂಬ ಡೆತ್‌ನೋಟ್ ಬರೆದಿಟ್ಟು, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ಬಾಲಕನನ್ನು ತಮ್ಲುಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಸದ್ಯ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಂಗಡಿಯ ಮಾಲೀಕನಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಕೇಳಿಕೊಂಡಿದ್ದು, ಆತ ನಿರಾಕರಿಸಿದ್ದಾನೆ. ಜೊತೆಗೆ ಕರೆಗೂ ಪ್ರತಿಕ್ರಿಯೆ ನೀಡುತ್ತಿಲ್ಲ. ಸದ್ಯ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.














