ಮನೆ ರಾಜ್ಯ ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಪ್ರಕಟ: ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡಗೆ ಭರ್ಜರಿ ಗೆಲುವು

ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಪ್ರಕಟ: ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡಗೆ ಭರ್ಜರಿ ಗೆಲುವು

0

ಮೈಸೂರು (Mysuru): ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರು 12,205 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಮಧು ಜಿ. ಮಾದೇಗೌಡ ಅವರು ಒಟ್ಟು 45,275 ಮತಗಳನ್ನು ಪಡೆದುಕೊಂಡಿದ್ದು, 12,205 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ  ಚುನಾವಣೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ  ಮತ್ತು ಜೆಡಿಎಸ್ ಗೆ ತೀವ್ರ ಮುಖಭಂಗವಾಗಿದೆ.

ಗೆಲುವಿಗೆ ನಿಗದಿಯಾದ 46,083 ಮತಗಳ ಕೋಟಾವನ್ನ ತಲುಪಲು 808 ಮತಗಳ ಕೊರತೆ ಎದುರಾಗಿತ್ತು. ಇದೇ ವೇಳೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿಯ ಮೈ.ವಿ. ರವಿಶಂಕರ್ ಎಲಿಮಿನೆಟ್ ಮಾಡಿ ಅಲ್ಲಿಂದ 808 ಮತ ಪಡೆಯಲಾಯ್ತು. ಆ ಮೂಲಕ ನಿಗಧಿತ ಕೋಟಾವನ್ನು ಕೈ ಅಭ್ಯರ್ಥಿ ತಲುಪಿದರು. ಬಿಜೆಪಿ ಒಟ್ಟು 33,878 ಮತ ಪಡೆದು ಮೈ.ವಿ. ರವಿಶಂಕರ್ ಸೋಲು ಅನುಭವಿಸಿದರು. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು 19,630 ಮತ ಪಡೆದು ಹೀನಾಯ ಸೋಲು ಕಂಡರು.

ಇನ್ನು ಒಟ್ಟು 87413 ಮತಗಳು ಚಲಾವಣೆಯಾಗಿವೆ. ಒಟ್ಟು 4750   ಕೋಟಾ ಮತಗಳು ಚಲಾವಣೆಯಾಗಿದ್ದು ಎಲ್ಲವೂ ಸೇರಿ 92163 ಮತಗಳು ಚಲಾವಣೆಯಾಗಿವೆ.

ಇಲ್ಲಿಯವರೆಗೆ ಪದವೀಧರ ಕ್ಷೇತ್ರದ ಯಾವ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಿರಲಿ, ಗೆಲುವಿನ ಸನಿಹಕ್ಕೂ ಹೋಗಲಾಗಿರಲಿಲ್ಲ. ಆದರೆ ಈ ಬಾರಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ  ಹೆಚ್ಚಿನ ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ.

ಪದವೀಧರರ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳದ್ದೇ ಕಾರುಬಾರು ಜೋರಾಗಿತ್ತು. ಇವೆರೆಡರ ನಡುವೆಯೇ ಪೈಪೋಟಿ ನಡೆಯುತ್ತಿತ್ತು. ಇಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿತ್ತು. ಆದರೆ ಈ ಬಾರಿ ಪದವೀಧರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಕೈ ಹಿಡಿಯುವ ಮೂಲಕ ಮಧು ಜಿ.ಮಾದೇಗೌಡ ಅವರಿಗೆ ಗೆಲುವು ತಂದುಕೊಟ್ಟಿದ್ದಾರೆ.

ಮೊದಲ ಪ್ರಾಶಸ್ತ್ಯದ ಮತ ಎಣಿಕೆ ವೇಳೆ ಯಾವೊಬ್ಬ ಅಭ್ಯರ್ಥಿಯೂ ನಿಗದಿತ ಗುರಿ ಮುಟ್ಟದ ಕಾರಣ  ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆಗೆ ಮುಂದಾಗಲಾಯಿತು. ಈ ವೇಳೆಯೂ ಕೂಡ  ಕಾಂಗ್ರೆಸ್ ಅಭ್ಯರ್ಥಿಯೇ ಎಲ್ಲಾ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡರು. ಎಲಿಮಿನೇಷನ್ ಸುತ್ತಿನಲ್ಲಿ ಅತಿ ಹೆಚ್ಚು ಎರಡನೇ ಪ್ರಾಶಸ್ತ್ಯ ಮತಗಳನ್ನು ಪಡೆದ ಕಾಂಗ್ರೆಸ್ ಗೆದ್ದು ಬೀಗಿದೆ.‌

ಕೆಲವು ಬಿಜೆಪಿ ನಾಯಕರು ನಾಲಿಗೆ ಹರಿ ಬಿಟ್ಟಿದ್ದೇ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣವಾಗಿರಬಹುದೆಂಬ ಮಾತುಗಳು ಇದೀಗ ಪಕ್ಷದಲ್ಲಿಯೇ ಆರಂಭವಾಗಿದೆ. ಚುನಾವಣೆಯ ಆರಂಭದಲ್ಲೇ ವಿರೋಧ ಪಕ್ಷದ ಮುಖಂಡರನ್ನು ಟೀಕಿಸುವ ಭರದಲ್ಲಿ ಬಿಜೆಪಿಯ ಕೆಲವರು ನಾಲಿಗೆ ಹರಿ ಬಿಟ್ಟದ್ದು, ಸಹ ಚುನಾವಣೆಯಲ್ಲಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ. ಜತೆಗೆ ನಾಯಕರ ಒಗ್ಗಟಿನ ಕೊರತೆ ಸಹ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.