ಮನೆ ಸ್ಥಳೀಯ ಮೈಸೂರು : ಟಿಪ್ಪರ್-ಟಾಟಾ ಏಸ್ ನಡುವೆ ಡಿಕ್ಕಿ : ಮಕ್ಕಳು ಸೇರಿದಂತೆ ಹಲವರಿಗೆ ಗಂಭೀರ ಗಾಯ

ಮೈಸೂರು : ಟಿಪ್ಪರ್-ಟಾಟಾ ಏಸ್ ನಡುವೆ ಡಿಕ್ಕಿ : ಮಕ್ಕಳು ಸೇರಿದಂತೆ ಹಲವರಿಗೆ ಗಂಭೀರ ಗಾಯ

0

ಮೈಸೂರು: ಮೈಸೂರಿನಲ್ಲಿ ಭೀಕರ ಅಪಘಾತವೊಂದು ಸಂಭವಿಸಿ, ಮಕ್ಕಳನ್ನು ಕೂಡ ಒಳಗೊಂಡು ಹಲವರಿಗೆ ಗಂಭೀರ ಗಾಯಗಳಾದ ಘಟನೆ ಇಡೀ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಗುಜ್ಜೆಗೌಡನಪುರ ಬಳಿ ಇಂದು ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ.

ಮಾಹಿತಿ ಪ್ರಕಾರ, ಹೆಚ್.ಡಿ. ಕೋಟೆ ತಾಲೂಕಿನ ಗುಜ್ಜೆಗೌಡನಪುರದ ಗ್ರಾಮಸ್ಥರು ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟಾಟಾ ಏಸ್ ವಾಹನದಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಕಟ್ಟೆಮನುಗನಹಳ್ಳಿ ಎಂಬ ಸ್ಥಳದಿಂದ ಹೊರಟ ಈ ವಾಹನ, ಮಧ್ಯಮಾರ್ಗದಲ್ಲಿ ಟಿಪ್ಪರ್ ಲಾರಿಯೊಂದರೊಂದಿಗೆ ಭೀಕರವಾಗಿ ಡಿಕ್ಕಿಯಾದ ಪರಿಣಾಮ, ವಾಹನದಲ್ಲಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿವೆ.

ಅಪಘಾತದ ತೀವ್ರತೆಯಿಂದ ಟಾಟಾ ಏಸ್ ಸಂಪೂರ್ಣವಾಗಿ ಜಖಂಗೊಂಡಿದೆ. ಸ್ಥಳೀಯರು ಕೂಡಲೇ ಸಹಾಯಕ್ಕೆ ಧಾವಿಸಿ ಗಾಯಾಳುಗಳನ್ನು ಸಮೀಪದ ಕೆ.ಆರ್ ಆಸ್ಪತ್ರೆಗೆ ಕರೆತಂದಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಕಾರಣ, ತುರ್ತು ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ನಂತರ ಘಟನಾ ಸ್ಥಳಕ್ಕೆ ಎಚ್.ಡಿ. ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಭೇಟಿ ನೀಡಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.