ಮನೆ ಸುದ್ದಿ ಜಾಲ ತಮಿಳುನಾಡು: ಚಾಲಕನಿಗೆ ಬಸ್ ಚಲಾಯಿಸುತ್ತಿರುವಾಗಲೇ ಹೃದಯಾಘಾತ!

ತಮಿಳುನಾಡು: ಚಾಲಕನಿಗೆ ಬಸ್ ಚಲಾಯಿಸುತ್ತಿರುವಾಗಲೇ ಹೃದಯಾಘಾತ!

0

ತಮಿಳುನಾಡು : ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಈ ಗಂಭೀರ ಘಟನೆ ನಡೆದಿದೆ. ಖಾಸಗಿ ಬಸ್‌ ಚಾಲಕ ಚಾಲನೆಯಲ್ಲಿದ್ದಾಗಲೇ ಹೃದಯಾಘಾತಕ್ಕೆ ತುತ್ತಾಗಿ ಸಾವಿಗೀಡಾಗಿದ್ದಾನೆ. ಕಂಡಕ್ಟರ್ ನ ಸಮಯ ಪ್ರಜ್ಞೆಯಿಂದ 35 ಪ್ರಯಾಣಿಕರ ಜೀವ ಉಳಿದಿದೆ.

ಈ ಘಟನೆ ಶುಕ್ರವಾರ, ಮೇ 23ರಂದು ನಡೆದಿದೆ. ಪಳನಿ ಬಸ್ ನಿಲ್ದಾಣದಿಂದ ಪುದುಕೊಟ್ಟೈಗೆ ಹೊರಟ್ಟಿದ್ದ ಖಾಸಗಿ ಬಸ್ ಮಧ್ಯಮಾರ್ಗದಲ್ಲಿ ಈ ಆಘಾತ ಸಂಭವಿಸಿದೆ. ಬಸ್ ಚಲಾಯಿಸುತ್ತಿದ್ದ ಚಾಲಕ ಪ್ರಭು ಹೃದಯಾಘಾತಕ್ಕೊಳಗಾಗಿ ತೀವ್ರ ವೇದನೆಯಲ್ಲಿ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡರು. ಈ ಸಂದರ್ಭ ಬಸ್ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಓಡಲಾರಂಭಿಸಿತು.

ಇದನ್ನು ಗಮನಿಸಿದ ಬಸ್ ಕಂಡಕ್ಟರ್ ತಕ್ಷಣ ತನ್ನ ಕೈಯಿಂದ ತುರ್ತು ಬ್ರೇಕ್‌ ಹಾಕಿ ಬಸ್ ನಿಲ್ಲಿಸಿದರು. ಬಸ್ಸಿನಲ್ಲಿ ಆಗಮಿಸುತ್ತಿದ್ದ 35ಕ್ಕೂ ಹೆಚ್ಚು ಪ್ರಯಾಣಿಕರು ಈ ಸಮಯದಲ್ಲಿ ಭಯಾನಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಆದರೆ ಕಂಡಕ್ಟರ್‌ನ ಕ್ಷಿಪ್ರ ನಿರ್ಧಾರದಿಂದ ದೊಡ್ಡ ದುರಂತವೊಂದು ತಪ್ಪಿದಂತಾಯಿತು. ಆದರೆ ದುರಾದೃಷ್ಟವಶಾತ್‌ ಚಾಲಕ ಪ್ರಭು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅಪಘಾತದ ತೀವ್ರ ಕ್ಷಣಗಳು ಬಸ್ಸಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದವು. ಈ ದೃಶ್ಯವನ್ನು ಚಾಣಕ್ಯ ಟಿವಿ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹಲವಾರು ಜನರು ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ. ಚಾಲಕ ಕುಸಿದು ಬಿದ್ದ ಕ್ಷಣದಿಂದ ಹಿಡಿದು, ಕಂಡಕ್ಟರ್ ಬಸ್‌ ನಿಲ್ಲಿಸುವ ತನಕದ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತದೆ.