ಮನೆ ಸುದ್ದಿ ಜಾಲ ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ : ಡಾ. ಕುಮಾರ

ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ : ಡಾ. ಕುಮಾರ

0

ಮಂಡ್ಯ: ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯನ್ನು ರೈತರು ಬೆಳೆಯುತ್ತಿದ್ದು, ಮಾರುಕಟ್ಟೆ ಕಲ್ಪಿಸಲು ಮಾವು ಮತ್ತು ಹಲಸಿನ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ “ಮಾವು ಮತ್ತು ಹಲಸು ಮೇಳ ಮತ್ತು ಸಸ್ಯ ಸಂತೆ ಪ್ರದರ್ಶನ ಮತ್ತು ಮಾರಾಟ ಮೇಳ-2025” ಅನ್ನು ಉದ್ಘಾಟಿಸಿ ಮಾತನಾಡಿದ ಅವರು ತೋಟಗಾರಿಕೆ ಬೆಳೆಗಳಲ್ಲಿ ಮಾವು ಪ್ರಮುಖವಾದದ್ದು, ಜಿಲ್ಲೆಯಲ್ಲಿ ವಾರ್ಷಿಕ 20 ಸಾವಿರಕ್ಕೂ ಹೆಚ್ಚು ಟನ್ ಮಾವಿನ ಉತ್ಪಾದನೆಯಾಗುತ್ತಿದೆ ಎಂದರು.

ಉತ್ತಮ ಬೆಲೆಗೆ ಗ್ರಾಹಕ ಗುಣಮಟ್ಟದ ಮಾವಿನ ಹಣ್ಣುಗಳನ್ನು ಕಲ್ಪಿಸಿ ರೈತರು ಮತ್ತು ಗ್ರಾಹಕರ ನಡುವೆ ಸ್ನೇಹ ಸಂಬAಧ ಸಾಧಿಸಲು ಜೊತೆಗೆ ಮಾವು ಬೆಳೆಗಾರರಿಗೆ ಉತ್ತೇಜನ ನೀಡಲು ಈ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅನೇಕ ವರ್ಷಗಳ ಬಳಿಕ ಜಿಲ್ಲೆಯಲ್ಲಿ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಲಾಗಿದೆ, ಜೊತೆಗೆ ಉತ್ತಮ ಗುಣಮಟ್ಟದ ಹಣ್ಣಿನ ಗಿಡಗಳನ್ನು ನೀಡಬೇಕೆಂಬ ಸದುದ್ದೇಶದಿಂದ ಸಸ್ಯ ಸಂತೆ ಪ್ರದರ್ಶನ ಮತ್ತು ಮಾರಾಟವನ್ನು ಸಹ ಹಮ್ಮಿಕೊಳ್ಳಲಾಗಿದೆ.

ಮೇಳದಲ್ಲಿ 15 ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ಜನತೆಗೆ ಕಾರ್ಬೈಡ್ ಹಾಗೂ ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳನ್ನು ನೀಡುವ ಉದ್ದೇಶದಿಂದ ಸ್ಥಳೀಯ ರೈತರನ್ನು ಒಳಗೊಂಡಂತೆ ರಾಜ್ಯದ ನಾನಾ ಭಾಗಗಳಿಂದ ವಿವಿಧ ತಳಿಯ 40 ಕ್ಕೂ ಹೆಚ್ಚು ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ, ಇದರ ಜೊತೆ 10 ಕ್ಕೂ ಹೆಚ್ಚು ವಿಧದ ಹಲಸಿನ ಹಣ್ಣನ್ನು ಇರಿಸಲಾಗಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ನಾನಾ ಭಾಗಗಳಿಂದ ರೈತರು ತಂದಿದ್ದ ಬಾದಾಮಿ, ರಸಪುರಿ, ಮಲ್ಲಿಕಾ, ಮಲಗೋವಾ, ಸೆಂದೂರ, ಕೇಸರ್, ಸಕ್ಕರೆಬುತ್ತಿ, ಇಮಾಮ್ ಪಸಂದ, ತೋತಾಪುರಿ, ಲಾಂಗ್ರಾ, ರುಮಾನಿ, ಚಿಲಕ್ ರಸ, ಆಮ್ಲೇಟ್, ಮದನಪಲ್ಲಿ ಸೇರಿದಂತೆ 40 ಕ್ಕೂ ಹಚ್ಚಿನ ಮಾವಿನ ಹಣ್ಣುಗಳ ಪ್ರದರ್ಶನ ಗ್ರಾಹಕರ ಮನಸೆಳೆದವು.

ಮೇಳದಲ್ಲಿ 10 ಕ್ಕೂ ಹೆಚ್ಚಿನ ವಿವಿಧ ತಳಿ ಹಲಸಿನ ಹಣ್ಣುಗಳನ್ನು ಪ್ರದರ್ಶಿಸಲಾಯಿತು, ಗುಬ್ಬಿ ಬಕ್ಕೆ, ಬಕ್ಕೆ, ಚೇಲೂರು ಬಕ್ಕೆ, ಅಜ್ಜಿ ಹಲಸು, ಸಕ್ಕರೆ ಪಟ್ಟಣ ಒನಕೆ, ಗುರುಗಳ ತೋಟ,ಚಂದ್ರ ಹಲಸು ಸೇರಿದಂತೆ ಇನ್ನಿತರ ಹಲಸಿನ ಹಣ್ಣುಗಳನ್ನು ಗ್ರಾಹಕರು ಕಣ್ತುಂಬಿಕೊAಡರು.

ಉತ್ತಮ ಗುಣಮಟ್ಟದ ಕಸಿ/ ಸಸಿಗಳನ್ನು ಇಲಾಖಾ ದರದಲ್ಲಿ ಮಾರಾಟ ಮತ್ತು ಪ್ರದರ್ಶನ ಮಾಡಲಾಯಿತು, ವಿವಿಧ ಬಗೆಯ ಸಸಿಗಳಾದ ನಿಂಬೆ, ಮಾವು, ಸೀಬೆ (ಅಲಹಾಬಾದ್ ಸಫೇದ್), ಸಪೋಟ ( ಕ್ರಿಕೆಟ್ ಬಾಲ್), ನುಗ್ಗೆ, ಅಡಿಕೆ ಸೇರಿದಂತೆ ಇನ್ನಿತರ ಸಸಿಗಳನ್ನು ಮಾರಾಟಕ್ಕೆ ಇಡಲಾಗಿದೆ.