ಮನೆ ರಾಜ್ಯ ಡಿಫೆನ್ಸ್ ಕಾರಿಡಾರ್‌ಗೆ ಪಟ್ಟು: ಎಂ.ಬಿ. ಪಾಟೀಲ್ ಶೀಘ್ರದಲ್ಲೇ ರಾಜನಾಥ್ ಸಿಂಗ್ ಭೇಟಿಗೆ ಸಿದ್ಧತೆ

ಡಿಫೆನ್ಸ್ ಕಾರಿಡಾರ್‌ಗೆ ಪಟ್ಟು: ಎಂ.ಬಿ. ಪಾಟೀಲ್ ಶೀಘ್ರದಲ್ಲೇ ರಾಜನಾಥ್ ಸಿಂಗ್ ಭೇಟಿಗೆ ಸಿದ್ಧತೆ

0

ಬೆಂಗಳೂರು: ರಾಜ್ಯಕ್ಕೆ ಡಿಫೆನ್ಸ್ ಕಾರಿಡಾರ್ ನೀಡುವ ವಿಚಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತೀವ್ರ ನಿಲುವು ತಾಳಿದ್ದು, ಶೀಘ್ರದಲ್ಲೇ ದೆಹಲಿಗೆ ತೆರಳಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ರಾಜ್ಯದ ಪರವಾಗಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಈ ಕುರಿತು ಸೋಮವಾರ ಮಾತನಾಡಿದ ಎಂ.ಬಿ. ಪಾಟೀಲ್, “ಡಿಫೆನ್ಸ್‌ ವಹಿವಾಟಿನಲ್ಲಿ ಕರ್ನಾಟಕ ದೇಶಕ್ಕೆ 65%ರಷ್ಟು ಕೊಡುಗೆ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ತೃತೀಯ ಸ್ಥಾನದಲ್ಲಿರುವ ರಾಜ್ಯವಾಗಿದ್ದರೂ ಡಿಫೆನ್ಸ್ ಕಾರಿಡಾರ್ ಯೋಜನೆ ನಮ್ಮ ರಾಜ್ಯದಲ್ಲಿ ಘೋಷಿಸದಿರುವುದು ನ್ಯಾಯಸಮ್ಮತವಲ್ಲ. ಉತ್ತರ ಪ್ರದೇಶ ಮತ್ತು ತಮಿಳುನಾಡಿಗೆ ಈಗಾಗಲೇ ಈ ಯೋಜನೆ ಮಂಜೂರಾಗಿದೆ. ನಾವು ಇದರ ವಿರುದ್ಧವಲ್ಲ. ಆದರೆ ಕರ್ನಾಟಕಕ್ಕೂ ಈ ಯೋಜನೆ ಅಗತ್ಯ” ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗಿನ ನೀತಿ ಆಯೋಗದ ಸಭೆಯಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೆಚ್‌ಎಎಲ್ ಕಾರ್ಖಾನೆಯನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸಬೇಕೆಂದು ಮನವಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡುತ್ತಾ, “ನಾಯ್ಡು ಅವರಿಗೆ ಉದ್ಯಮ ಬೆಳವಣಿಗೆಯಲ್ಲಿ ಅನುಭವವಿದೆ. ಅವರು ಹೆಚ್‌ಎಎಲ್ ಘಟಕ ಸ್ಥಾಪನೆಗಾಗಿ ತಮ್ಮ ರಾಜ್ಯದಲ್ಲಿ ಜಮೀನು ನೀಡಲು ಮುಂದಾಗಬಹುದು. ಆದರೆ ನಮ್ಮಲ್ಲಿರುವ ಕೈಗಾರಿಕೆಗಳನ್ನು ಎಳೆದುಕೊಂಡು ಹೋಗುವ ಆಲೋಚನೆ ಸರಿಯಲ್ಲ” ಎಂದು ಹೇಳಿದರು.

ರಾಜನಾಥ್ ಸಿಂಗ್ ಭೇಟಿಗೆ ತೆರಳುವ ವೇಳೆ ಕೇಂದ್ರ ಸಂಪುಟದಲ್ಲಿ ಇದ್ದ ಕರ್ನಾಟಕದ ಸಚಿವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಜೊತೆಗೆ, ಈ ಕುರಿತು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ತಿಳಿಸಿದರು.

ಈ ಸಂದರ್ಭದಲ್ಲಿ ಎಂ.ಬಿ. ಪಾಟೀಲ್ ರಾಜ್ಯದ ಹಿತಕ್ಕಾಗಿ ಯಾವುದೇ ಹಿಂಜರಿಕೆ ಇಲ್ಲದೆ ಕೇಂದ್ರದ ಮುಂದೆ ಧ್ವನಿ ಎತ್ತುವುದಾಗಿ ದೃಢವಾಗಿ ಹೇಳಿದರು. “ನಾವು ಕೈಗಾರಿಕಾ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದೇವೆ. ರಾಜ್ಯಕ್ಕೆ ಡಿಫೆನ್ಸ್ ಕಾರಿಡಾರ್ ಅಗತ್ಯ ಮತ್ತು ಅದು ನಮ್ಮ ಹಕ್ಕು” ಎಂಬ ನಿಲುವು ವ್ಯಕ್ತಪಡಿಸಿದರು.