ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಲನಚಿತ್ರರಂಗದ ಪ್ರಸಿದ್ಧ ನಟ ಶ್ರೀಧರ್ ನಾಯಕ್ (47) ಅವರು ಮೇ 26 ರಂದು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರ ನಿಧನದಿಂದ ಕನ್ನಡ ರಂಗಭೂಮಿ ಮತ್ತು ಕಿರುತೆರೆ ಜಗತ್ತಿನಲ್ಲಿ ಅಗಾಧ ಶೂನ್ಯತೆಯುಂಟಾಗಿದೆ.
ಶ್ರೀಧರ್ ನಾಯಕ್ ಅವರು ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅನೇಕ ತಿಂಗಳುಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿತ್ತು. ಆದರೆ ಕಳೆದ ಕೆಲ ದಿನಗಳಿಂದ ಸ್ಥಿತಿ ಹೆಚ್ಚು ಗಂಭೀರವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ವೈದ್ಯಕೀಯ ಸಲಹೆ ಮೇರೆಗೆ ಅವರನ್ನು ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಶ್ವಾಸಕೋಶ ಸಂಬಂಧಿ ಸಮಸ್ಯೆಗೆ ತುತ್ತಾಗಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶ್ರೀಧರ್ ನಾಯಕ್ ಅವರು ಕನ್ನಡ ಕಿರುತೆರೆಯಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿ ಗಮನಸೆಳೆದವರು. ಕೇವಲ ಕಿರುತೆರೆಯಲ್ಲದೇ, ಶ್ರೀಧರ್ ನಾಯಕ್ ಅವರು ಕೆಲ ಕನ್ನಡ ಚಲನಚಿತ್ರಗಳಲ್ಲೂ ಅಭಿನಯಿಸಿದ್ದರು.














