ಮನೆ ರಾಷ್ಟ್ರೀಯ ‘ಅಗ್ನಿಪಥ್’ ಯೋಜನೆ ವಿರುದ್ಧ ಪ್ರತಿಭಟನೆ: ರೈಲಿಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು

‘ಅಗ್ನಿಪಥ್’ ಯೋಜನೆ ವಿರುದ್ಧ ಪ್ರತಿಭಟನೆ: ರೈಲಿಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು

0

ನವದೆಹಲಿ (New Delhi): ಸೇನಾ ನೇಮಕಾತಿ ಕುರಿತ ‘ಅಗ್ನಿಪಥ್’ ಯೋಜನೆಗೆ ಬಿಹಾರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ರೈಲಿಗೆ ಬೆಂಕಿ ಹಚ್ಚಿದ್ದಾರೆ.

ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನೆಗೆ ‘ಅಗ್ನಿವೀರರ’ (ಯೋಧರು) ನೇಮಕಾತಿ ನಡೆಸುವುದಾಗಿ ಕೇಂದ್ರ ಸರ್ಕಾರವು ಎರಡು ದಿನಗಳ ಹಿಂದಷ್ಟೇ ಪ್ರಕಟಿಸಿತ್ತು. ಆದರೆ ಈ ಯೋಜನೆಗೆ ಬಿಹಾರ ಮತ್ತು ರಾಜಸ್ಥಾನದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಉದ್ಯೋಗ ಭದ್ರತೆ ಮತ್ತು ಪಿಂಚಣಿ ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಉದ್ಯೋಗಾಕಾಂಕ್ಷಿಗಳು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ.

ದೇಶದ ಸಶಸ್ತ್ರ ಪಡೆಗಳು ತಾರುಣ್ಯಯುತವಾಗಿ ಇರುವಂತೆ ನೋಡಿಕೊಳ್ಳುವುದು ಹೊಸ ಯೋಜನೆಯ ಉದ್ದೇಶ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ನಾಲ್ಕು ವರ್ಷಗಳ ಕರ್ತವ್ಯ ಅವಧಿಯ ಮಿತಿ ಮತ್ತು ಬಳಿಕ ಶೇ.25ರಷ್ಟು ಯೋಧರಿಗೆ ಮಾತ್ರ ಪೂರ್ಣಾವಧಿ ಸೇವೆಗೆ ಅವಕಾಶ ಕಲ್ಪಿಸುವ ಕ್ರಮದ ವಿರುದ್ಧ ಸೇನೆಗೆ ಸೇರುವ ಹಂಬಲವಿರುವ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಾಲ್ಕು ವರ್ಷಗಳ ಕರ್ತವ್ಯದ ಬಳಿಕ ಪ್ರತಿ ಅಗ್ನಿವೀರನಿಗೆ ಸುಮಾರು 11.71 ಲಕ್ಷ ರೂ. ನಿಧಿಯು ದೊರೆಯಲಿದೆ. ಅವರಿಗೆ ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಮೊದಲ ವರ್ಷದಲ್ಲಿ 46 ಸಾವಿರ ಯುವಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ಆದರೆ ನಾಲ್ಕು ವರ್ಷದ ನಂತರ ಕಾಯಂ ನೇಮಕಾತಿಯಲ್ಲಿ ಅವಕಾಶ ಪಡೆಯಲು ಸಾಧ್ಯವಾಗದಿದ್ದರೆ, ಅವರ ಭವಿಷ್ಯದ ಗತಿ ಏನು?’ ಎಂದು ಪ್ರಶ್ನಿಸಿರುವ ಉದ್ಯೋಗಾಕಾಂಕ್ಷಿಗಳು, ಸರ್ಕಾರದ ಈ ಯೋಜನೆಯನ್ನು ಟೀಕಿಸಿದ್ದಾರೆ. 

ಇನ್ನು ನಾವಡದಲ್ಲಿ ನ್ಯಾಯಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕಿ ಅರುಣಾದೇವಿ ಅವರ ವಾಹನದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಶಾಸಕರು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕರು, ನನ್ನ ಕಾರಿನ ಮೇಲೆ ಪಕ್ಷದ ಧ್ವಜವನ್ನು ಅಳವಡಿಸಿದ್ದನ್ನು ನೋಡಿದ ಪ್ರತಿಭಟನಾಕಾರರು ಪ್ರಚೋದನೆಗೆ ಒಳಗಾಗಿದ್ದಾರೆಂದು ತೋರುತ್ತದೆ. ಅವರು ಅದನ್ನು ಹರಿದು ಹಾಕಿದರು. ನನ್ನ ಚಾಲಕ, ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಇಬ್ಬರಿಗೂ ಗಾಯಗಳಾಗಿವೆ. ಪೊಲೀಸ್ ದೂರು ದಾಖಲಿಸಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ.

ಬಿಹಾರದ ಆರಾ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಭುವಾ ಮತ್ತು ಛಾಪ್ರಾ ನಿಲ್ದಾಣಗಳಲ್ಲಿ ಸ್ಥಾಯಿ ಬೋಗಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವೆಡೆ ಕಂಪಾರ್ಟ್‌ಮೆಂಟ್‌ಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರಿಂದ ರೈಲ್ವೇ ಆಸ್ತಿಗೆ ಹಾನಿಯಾಗಿದೆ. ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.