ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಬಮೂಲ್ ಸಹಕಾರ ಸಂಘದ ಚುನಾವಣೆಯ ಬೆನ್ನಲ್ಲೇ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹೊಸ ವಿವಾದಕ್ಕೆ ಕಾರಣವಾಗಿವೆ. ಚುನಾವಣೆಗೆ ಒಂದು ದಿನ ಮೊದಲು 17 ಜೆಡಿಎಸ್ ಬೆಂಬಲಿತ ಮತದಾರರನ್ನು ಅನರ್ಹಗೊಳಿಸಿರುವ ಕ್ರಮ, ಕಾಂಗ್ರೆಸ್ ಅಧಿಕಾರದ ದುರುಪಯೋಗವೋ ಎಂಬ ಪ್ರಶ್ನೆಗಳನ್ನು ಎಬ್ಬಿಸಿದೆ.
ಬಮೂಲ್ ಚುನಾವಣೆಗಾಗಿ ಚನ್ನಪಟ್ಟಣ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 17 ಜನರನ್ನು ಸಹಕಾರ ಇಲಾಖೆಯ ಸಹಾಯಕ ನಿಬಂಧಕ ವೆಂಕಟೇಶ್ ಅನರ್ಹಗೊಳಿಸಿದ್ದರ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಮತದಾರರ ಮೇಲೆ ಅನರ್ಹತೆಗೆ ಕಾರಣ ಎಂಬಂತೆ ಯಾವುದೇ ಸಾಬೀತು ಇಲ್ಲದೆಯೇ ಈ ಕ್ರಮ ಕೈಗೊಂಡಿರುವ ಆರೋಪ ಕೇಳಿಬಂದಿದೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್ ಹೂಡಿಕೆ ಮಾಡಿಕೊಂಡಿದೆ ಎಂಬ ಆರೋಪಗಳು ಬೆಳೆಯುತ್ತಿದ್ದಂತೆ, ಈ ನಿರ್ಧಾರಕ್ಕೂ ರಾಜಕೀಯ ಉದ್ದೇಶವಿದೆ ಎಂಬ ಅನುಮಾನಗಳು ಗಟ್ಟಿಯಾಗಿವೆ. ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಿಗೆ ನೆರವಾಗಲು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಸಾಬೀತಾಗದ ದೂರಿನ ಆಧಾರದಲ್ಲಿ ಮತದಾರರನ್ನು ಅನರ್ಹಗೊಳಿಸಲು ಸೂಚನೆ ನೀಡಿದರೆಂಬ ಆರೋಪಗಳು ಕೇಳಿಬಂದಿವೆ.
ಅನರ್ಹಗೊಳಿಸಲಾದ ಮತದಾರರು ಹಾಗೂ ಜೆಡಿಎಸ್ ಕಾರ್ಯಕರ್ತರು ರಾಮನಗರದ ಸಹಕಾರ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, “ಇದು ಸ್ಪಷ್ಟ ರಾಜಕೀಯ ಷಡ್ಯಂತ್ರ. ಚುನಾವಣೆ ಹತ್ತಿರ ಬಂದಾಗ ಈ ರೀತಿ ಮತವನ್ನು ನಿಷ್ಕ್ರಿಯಗೊಳಿಸುವುದು ಸಾಂವಿಧಾನಿಕ ತಪ್ಪು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹಾಯಕ ನಿಬಂಧಕ ವೆಂಕಟೇಶ್ ಈ ಕುರಿತು ಸಮಜಾಯಿಷಿ ನೀಡಿದ್ದು, “ದೂರು ಬಂದ ಹಿನ್ನೆಲೆಯಲ್ಲಿ ಅನರ್ಹಗೊಳಿಸಿದೆ. ನನಗೆ ನಿಯಮಾನುಸಾರ ಕ್ರಮ ಕೈಗೊಳ್ಳುವ ಅಧಿಕಾರವಿದೆ” ಎಂದರು. ಆದರೆ, ಯಾವುದೇ ಸೂಕ್ತ ಪರಿಶೀಲನೆ ಇಲ್ಲದೆಯೇ ತೀರ್ಮಾನ ತೆಗೆದುಕೊಂಡಿರುವುದನ್ನು ಅವರು ಅಡಕವಾಗಿ ಒಪ್ಪಿಕೊಂಡಿದ್ದಾರೆ.














