ಮನೆ ಅಪರಾಧ ಬೆಂಗಳೂರು: ಕುಖ್ಯಾತ ಮನೆಗಳ್ಳ ಏಡ್ಸ್ ಮುರುಗನ್ ಸಹಚರರಿಬ್ಬರ ಬಂಧನ!

ಬೆಂಗಳೂರು: ಕುಖ್ಯಾತ ಮನೆಗಳ್ಳ ಏಡ್ಸ್ ಮುರುಗನ್ ಸಹಚರರಿಬ್ಬರ ಬಂಧನ!

0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಹು ದಿನಗಳಿಂದ ಪೊಲೀಸ್ ಇಲಾಖೆಗೆ ತಲೆನೋವಾಗಿದ್ದ ಕುಖ್ಯಾತ ಮನೆ ಕಳ್ಳರಿಬ್ಬರನ್ನು ಎಚ್ಎಎಲ್ ಠಾಣೆಯ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರು ಕುಖ್ಯಾತ ಮನೆಗಳ್ಳ ‘ಏಡ್ಸ್ ಮುರುಗನ್’ನ ನಿಕಟದ ಸಹಚರರು ಎನ್ನಲಾಗಿದೆ. ಇವರಿಂದ 600 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳ ಹೆಸರು ದಿನಕರನ್ ಮತ್ತು ರಘುರಾಮ್ ಎಂದು ಗುರುತಿಸಲಾಗಿದ್ದು, ಇಬ್ಬರೂ ತಮಿಳುನಾಡು ಮೂಲದವರು. ಪೊಲೀಸರು ನೀಡಿದ ಮಾಹಿತಿಯಂತೆ, ಆರೋಪಿಗಳು ತಿರುವಾಯೂರಿನಿಂದ ಬಸ್ ಮೂಲಕ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದರು. ಇವರು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು, ಬೆಳಗ್ಗೆ ಸಮಯದಲ್ಲಿ ಮನೆಯನ್ನ ಗುರುತಿಸಿ, ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು.

ಕಳ್ಳತನದ ವೇಳೆ ಕಾರಿನ ಜಾಕ್ ರಾಡ್‌ಗಳನ್ನು ಉಪಯೋಗಿಸಿ, ಮನೆ ಬಾಗಿಲುಗಳ ಕಿಟಕಿಗಳನ್ನು ಮುರಿದು ಒಳಗೆ ಪ್ರವೇಶಿಸಿ ಚಿನ್ನಾಭರಣ, ನಗದು ಹಾಗೂ ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದರು. ಈ ರೀತಿಯ ಘಟನೆಗಳಿಂದ ಹಲವಾರು ನಾಗರಿಕರು ಮನೆಯಿಂದ ದೂರ ಇರುವ ಸಂದರ್ಭಗಳಲ್ಲಿ ತಮ್ಮ ಆಸ್ತಿ ಸಂಪತ್ತಿಗೆ ಭದ್ರತೆಯ ಕೊರತೆಯಿಂದ ಬಳಲುತ್ತಿದ್ದರು.

ಪೊಲೀಸರು ಸಕ್ರಿಯ ತನಿಖೆ ನಡೆಸಿ, ಆಧುನಿಕ ತಂತ್ರಜ್ಞಾನ ಹಾಗೂ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಇಬ್ಬರನ್ನು ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಬಂಧನದ ಬಳಿಕ ನಡೆಸಿದ ವಿಚಾರಣೆಯಲ್ಲಿ, ಇಬ್ಬರೂ ಬಹುಸಂಖ್ಯೆಯ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ 600 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.