ಮನೆ ರಾಜ್ಯ ಎಂಎಲ್‌ಸಿ ರವಿ ಕುಮಾರ್ ಹೇಳಿಕೆಗೆ ‘ಕೆಎಎಸ್ ಅಧಿಕಾರಿಗಳ ಸಂಘ’ದ ತೀವ್ರ ಖಂಡನೆ : ಕ್ಷಮೆಯಾಚನೆಗೆ ಒತ್ತಾಯ

ಎಂಎಲ್‌ಸಿ ರವಿ ಕುಮಾರ್ ಹೇಳಿಕೆಗೆ ‘ಕೆಎಎಸ್ ಅಧಿಕಾರಿಗಳ ಸಂಘ’ದ ತೀವ್ರ ಖಂಡನೆ : ಕ್ಷಮೆಯಾಚನೆಗೆ ಒತ್ತಾಯ

0

ಬೆಂಗಳೂರು: ಕಲಬುರಗಿಯ ಜಿಲ್ಲಾಧಿಕಾರಿ ವಿರುದ್ಧ ನೀಡಿದ ವಿವಾದಾಸ್ಪದ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ವಿರುದ್ಧ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಗಳ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ತಕ್ಷಣ ಬೇಷರತ್ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದೆ.

ಮಾಧ್ಯಮ ಪ್ರಕಟಣೆಯ ಮೂಲಕ ಪ್ರತಿಕ್ರಿಯೆ ನೀಡಿದ ಕೆಎಎಸ್ ಅಧಿಕಾರಿಗಳ ಸಂಘ, “ಕಲಬುರಗಿಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧಿಕಾರಿಯಾಗಿರುವ ಬಿ. ಫೌಜಿಯಾ ತರನ್ನುಮ್, ಐಎಎಸ್ ಅವರು ನಿಷ್ಠಾವಂತ, ಸಮರ್ಪಿತ ಹಾಗೂ ಸಜ್ಜನಾಧಿಕಾರಿ. ಅವರ ವಿರುದ್ಧ ರವಿ ಕುಮಾರ್ ಅವರು ಸಾರ್ವಜನಿಕ ವೇದಿಕೆಯಲ್ಲಿ ನೀಡಿದ ಹೇಳಿಕೆಗಳು ಪ್ರಚೋದನಕಾರಿ, ಸುಳ್ಳು ಆಧಾರರಹಿತ, ನ್ಯಾಯಸಮ್ಮತವಲ್ಲದ ಹೇಳಿಕೆಗಳು” ಎಂದು ತಿಳಿಸಿದೆ.

“ಈ ರೀತಿಯ ಹೇಳಿಕೆಗಳು ಅಧಿಕಾರಿಗಳಿಗೆ ತೀವ್ರ ಮಾನಸಿಕ ಆಘಾತವನ್ನುಂಟುಮಾಡುತ್ತವೆ. ಜೊತೆಗೆ ಅವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ತೊಂದರೆ ಅನುಭವಿಸುವ ಸಾಧ್ಯತೆಯಿದೆ” ಎಂದು ಸಂಘದ ಪದಾಧಿಕಾರಿಗಳು ದೂರಿದ್ದಾರೆ. ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳ ಗೌರವಕ್ಕೆ ಧಕ್ಕೆಯುಂಟು ಮಾಡುವ ಈ ರೀತಿಯ ಮಾತುಗಳು, ಆಡಳಿತ ವ್ಯವಸ್ಥೆಯ ಮೇಲೆಯೇ ಅಪನಂಬಿಕೆ ಮೂಡಿಸುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ಸಂಘದ ಹೇಳಿಕೆಯ ಪ್ರಕಾರ, “ರವಿ ಕುಮಾರ್ ಅವರಿಂದಾದ ಈ ಹೇಳಿಕೆ ಸಂಪೂರ್ಣವಾಗಿ ಬೇಜವಾಬ್ದಾರಿಯುತವಾಗಿದೆ. ಇಂತಹ ಹೇಳಿಕೆಗಳಿಗೆ ಅವರು ತಕ್ಷಣವೇ ಬೇಷರತ್ ಕ್ಷಮೆಯಾಚಿಸಬೇಕು. ಅವರ ಮಾತುಗಳು ಕೇವಲ ಫೌಜಿಯಾ ತರನ್ನುಮ್ ಅವರ ವಿರುದ್ಧವಲ್ಲದೆ, ಇಡೀ ಅಧಿಕಾರಿ ಸಮುದಾಯದ ಮಾನಸಿಕ ಸ್ಥಿತಿಗೆ ಧಕ್ಕೆಯುಂಟುಮಾಡಿವೆ” ಎಂಬ ಸಂದೇಶವನ್ನು ಸ್ಪಷ್ಟಪಡಿಸಲಾಗಿದೆ.

ಅಧಿಕಾರಿಗಳ ಸಂಘ ಮುಂದುವರೆದು ಹೇಳಿದ್ದು, “ಇದು ಕೇವಲ ಒಂದು ಅಧಿಕಾರಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಇಂತಹ ಹೇಳಿಕೆಗಳು ಮುಂದೆ ಅಧಿಕಾರಿಗಳ ಮೇಲೆ ಸಾರ್ವಜನಿಕರ ನಂಬಿಕೆ ಕುಗ್ಗಿಸುವ ಅಪಾಯವಿದೆ. ಹಾಗಾಗಿ ಈ ನಿಟ್ಟಿನಲ್ಲಿ ಸರ್ಕಾರವು ಅಧಿಕಾರಿಗಳ ಗೌರವ, ಸ್ವಾತಂತ್ರ್ಯ ಮತ್ತು ಕಾರ್ಯಕ್ಷಮತೆಗೆ ಸಂಪೂರ್ಣ ರಕ್ಷಣೆ ನೀಡಬೇಕು” ಎಂಬ ಆಶಯ ವ್ಯಕ್ತಪಡಿಸಿದ್ದಾರೆ.