ಮನೆ ರಾಜ್ಯ ಬೆಂಗಳೂರು: ಕಸಕ್ಕೂ ತೆರಿಗೆ ಶುಲ್ಕ ವಿಧಿಸುವ ನಿರ್ಧಾರ ಹಿಂಪಡೆಯುವಂತೆ ಆರ್. ಅಶೋಕ್ ಆಗ್ರಹ

ಬೆಂಗಳೂರು: ಕಸಕ್ಕೂ ತೆರಿಗೆ ಶುಲ್ಕ ವಿಧಿಸುವ ನಿರ್ಧಾರ ಹಿಂಪಡೆಯುವಂತೆ ಆರ್. ಅಶೋಕ್ ಆಗ್ರಹ

0

ಬೆಂಗಳೂರು: ಬೆಂಗಳೂರು ನಗರದ ನಿವಾಸಿಗಳ ಮೇಲೆ ಇತ್ತೀಚೆಗೆ ವಿಧಿಸಲಾದ ಕಸದ ಸೆಸ್ ಹಾಗೂ ಬಳಕೆದಾರರ ಶುಲ್ಕದ ನಿರ್ಧಾರವನ್ನು ವಿರೋಧಿಸಿ, ಪ್ರತಿಪಕ್ಷ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೊಸ ತೆರಿಗೆ ಭಾರವನ್ನು “ಅನ್ಯಾಯ” ಎನ್ನುತ್ತಾ, ಈ ನಿರ್ಧಾರವನ್ನು ಸರ್ಕಾರ ಹಿಂಪಡೆದು ಹಿಂದಿನಂತೆಯೇ ಚದರ ಅಡಿಗೆ ತಕ್ಕಂತೆ ಶುಲ್ಕ ವಿಧಿಸಬೇಕು. ಸರ್ಕಾರ ತಕ್ಷಣವೇ ಈ ನಿರ್ಧಾರ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಆರ್. ಅಶೋಕ್, “ಈ ಹಿಂದೆ ಕೇವಲ ಕಸದ ಸೆಸ್‌ ಮಾತ್ರ ಇತ್ತು. ಈಗ ಅದರ ಜೊತೆಗೆ ಬಳಕೆದಾರರ ಶುಲ್ಕವನ್ನೂ ವಿಧಿಸಿದ್ದಾರೆ. ಇದು ಜನರ ಮೇಲೆ ದ್ವಿತೀಯ ಬಾರಿಯ ತೆರಿಗೆ ಬಂಡಿ ಹೇರಿದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ದೂರಿದ್ದಂತೆ, “250 ಕೋಟಿ ರೂ. ಅನ್ನು ಈಗಾಗಲೇ ಸೆಸ್ ಮೂಲಕ ವಸೂಲಿ ಮಾಡಲಾಗುತ್ತಿದೆ. ಆದರೆ, ಕಸದ ಟೆಂಡರ್‌ಗಳು ಕೇವಲ 147 ಕೋಟಿ ರೂ. ಮೌಲ್ಯದವಷ್ಟೆ. ಈಗಲ್ಲದೆ ಬಳಕೆದಾರರ ಶುಲ್ಕ ಸೇರಿದರೆ ಸುಮಾರು 500-600 ಕೋಟಿ ರೂ. ಸಂಗ್ರಹವಾಗಲಿದೆ. ಈ ಹಣ ಎಲ್ಲಿಗೆ ಹೋಗುತ್ತೆ? ಯಾವ ಮನೆ ಹಾಳು ಮಾಡಲು ಸರ್ಕಾರ ಇಷ್ಟು ಹಣ ಕಲೆಹಾಕುತ್ತಿದೆ?” ಎಂಬ ಪ್ರಶ್ನೆಗಳನ್ನು ಎತ್ತಿದರು.

ಆರ್. ಅಶೋಕ್ ಮಾತುಗಳ ಪ್ರಕಾರ, ಈ ಹೊಸ ತೆರಿಗೆ ನಿರ್ಧಾರದ ಪರಿಣಾಮವಾಗಿ ಮನೆ ಬಾಡಿಗೆ, ಶಾಲೆ, ಆಸ್ಪತ್ರೆ, ಕಲ್ಯಾಣ ಮಂಟಪ, ಹೋಟೆಲ್‌ಗಳ ದರಗಳು ಹೆಚ್ಚಾಗಲಿವೆ. ಇದರಿಂದ ನೇರವಾಗಿ ಸಾರ್ವಜನಿಕರಿಗೆ ಆರ್ಥಿಕ ಹೊರೆ ಹೆಚ್ಚಲಿದೆ. “ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆ. ಜನರಿಗೆ ನೆರವಾಗಬೇಕಾದ ಸರ್ಕಾರವೇ ಅವರನ್ನು ದರೋಡೆ ಮಾಡುತ್ತಿದೆ” ಎಂದು ತೀವ್ರವಾಗಿ ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಈಗ ತೆರಿಗೆ ಸೇರ್ಪಡೆ ಮಾಡುತ್ತಿದೆ ಎಂದು ಆರೋಪಿಸಿದ ಅವರು, “ಈ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವತ್ತ ಸರ್ಕಾರ ಮುಂದಾಗಿದೆ. ಇದು ಮತದಾರರ ಆಧಾರದ ಮೇಲೆ ಗ್ಯಾರಂಟಿಗಳನ್ನು ನಿರ್ಧರಿಸುವ ಹುನ್ನಾರವಷ್ಟೆ” ಎಂದು ಕಿಡಿಕಾರಿದರು.

ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆಗಳ ವಿರುದ್ಧವೂ ಆರ್. ಅಶೋಕ್ ಸಿಡಿದರು. “ಅವನಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದ್ದೇ ತಪ್ಪು. ಕನ್ನಡ ಭಾಷೆ ಅವಹೇಳನೆಯಾಗುವಂತ ಹೇಳಿಕೆ ನೀಡಿರುವ ಆತನನ್ನು ರಾಜ್ಯಕ್ಕೆ ಪ್ರವೇಶ ಕೊಡಬಾರದು. ಈತನು ನಗರ ನಕ್ಸಲ ಮಾತ್ರವಲ್ಲ, ಕನ್ನಡದ ದ್ರೋಹಿಯೂ ಹೌದು. ಆತನ ಚಿತ್ರಗಳಿಗೆ ನಿಷೇಧವಾಗಬೇಕು” ಎಂದು ಟೀಕಿಸಿದರು.

ಕರಾವಳಿ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, “ಹಿಂದೂ ಕಾರ್ಯಕರ್ತರು ಕೊಲ್ಲಲ್ಪಟ್ಟಾಗ ನಾವು ಹೋರಾಟ ಮಾಡಿದ್ದೆವು. ಆದರೆ ಈ ಸರ್ಕಾರ ಮತೀಯ ನಾಯಕರ ಓಲೈಕೆಯಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಡೆಗಣಿಸುತ್ತಿದೆ” ಎಂದು ಆರೋಪಿಸಿದರು.