ಬೆಂಗಳೂರು: ನಗರದ ಕಾಡುಗೋಡಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಡ್ಯಾನ್ಸ್ ಕ್ಲಾಸ್ ಬಗ್ಗೆ ಮಾಹಿತಿ ನೀಡುವೆನೆಂದು ನಂಬಿಸಿ, ಬಾಲಕಿಯನ್ನು ಕಾರಿಗೆ ಹತ್ತಿಸಿಕೊಂಡು, ಲೈಂಗಿಕ ಕಿರುಕುಳ ನೀಡಿದ ಆರೋಪಿ ಡ್ಯಾನ್ಸ್ ಮಾಸ್ಟರ್ ಭಾರತಿ ಕಣ್ಣನ್ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಆರೋಪಿಯು ತನ್ನ ಕಾರು ನಿಲ್ಲಿಸಿ ಪರಿಚಯ ಮಾಡಿಕೊಂಡಿದ್ದಾನೆ. “ನಾನು ಡ್ಯಾನ್ಸ್ ಮಾಸ್ಟರ್, ನಿನಗೆ ಡ್ಯಾನ್ಸ್ ತರಗತಿ ಬಗ್ಗೆ ಮಾಹಿತಿ ಕೊಡುತ್ತೇನೆ” ಎಂದು ಬಾಲಕಿಗೆ ಹೇಳಿದ್ದಾನೆ.
ನಂತರ ಆರೋಪಿ, ಆಕೆಯನ್ನು ನಂಬಿಸಿ ತನ್ನ ಕಾರಿಗೆ ಹತ್ತಿಸಿಕೊಂಡು, ಬಾಲಕಿ ಕಾರಿನಲ್ಲಿ ಕುಳಿತ ಬಳಿಕ, ಕಾರು ಲಾಕ್ ಮಾಡಿದ ಭಾರತಿ ಕಣ್ಣನ್, ಸ್ವಲ್ಪ ದೂರ ಸಾಗಿದ ನಂತರ ಕಾರು ನಿಲ್ಲಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದನು. ಬಳಿಕ ಬಾಲಕಿಯನ್ನು ಹಿಂದಿರುಗಿಸಿ, ಅವಳ ಹತ್ತಿದ ಸ್ಥಳದ ಬಳಿಯೇ ಇಳಿಸಿದ್ದಾನೆ.
ಮನೆ ತಲುಪಿದ ಬಾಲಕಿ ನಂತರ ಪೋಷಕರಿಗೆ ವಿಷಯ ತಿಳಿಸಿದ್ದು, ತಕ್ಷಣವೇ ಪೋಷಕರು ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ ನಂತರ ಪೊಲೀಸರು ಕ್ರಮ ಕೈಗೊಂಡು ಆರೋಪಿ ಭಾರತಿ ಕಣ್ಣನ್‌ನ್ನು ಬಂಧಿಸಿದ್ದಾರೆ.














