ಮನೆ ಸ್ಥಳೀಯ ಮಳೆ ಅಬ್ಬರದಿಂದ ಕೆಆರ್‌ಎಸ್ ಡ್ಯಾಂನಲ್ಲಿ ಮೂರೇ ದಿನದಲ್ಲಿ 9 ಅಡಿ ಏರಿಕೆ.!

ಮಳೆ ಅಬ್ಬರದಿಂದ ಕೆಆರ್‌ಎಸ್ ಡ್ಯಾಂನಲ್ಲಿ ಮೂರೇ ದಿನದಲ್ಲಿ 9 ಅಡಿ ಏರಿಕೆ.!

0

ಮಂಡ್ಯ: ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮವಾಗಿ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಕೇವಲ ಮೂರು ದಿನಗಳ ಅವಧಿಯಲ್ಲಿ 9 ಅಡಿ ನೀರಿನ ಮಟ್ಟ ಏರಿಕೆಯಾಗಿದೆ. ಬರದ ಭೀತಿಯ ನಡುವೆ ಈ ಬೆಳವಣಿಗೆ ರೈತರ ಹಾಗೂ ಸಾರ್ವಜನಿಕರ ನಡುವೆ ಹೊಸ ಆಶಾಕಿರಣ ಮೂಡಿಸಿದೆ.

ಕೊಡಗು, ಹಾಸನ, ಚಾಮರಾಜನಗರ ಮತ್ತು ಮೈಸೂರು ಭಾಗಗಳಲ್ಲಿ ಬಿರುಸಿನ ಮಳೆಯು ಮುಂದುವರೆದಿದ್ದು, ಇದರಿಂದಾಗಿ ಡ್ಯಾಂಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಸದ್ಯಕ್ಕೆ ಕೆಆರ್‌ಎಸ್‌ ಡ್ಯಾಂಗೆ 22,788 ಕ್ಯೂಸೆಕ್ ನೀರಿನ ಒಳಹರಿವು ಹಿರಿದು ಬರುತ್ತಿದೆ.

ಇದರಿಂದಾಗಿ ಮೂರೇ ದಿನಗಳಲ್ಲಿ ಡ್ಯಾಂನ ನೀರಿನ ಮಟ್ಟ 89 ಅಡಿಯಿಂದ 98 ಅಡಿಗೆ ಏರಿಕೆಯಾಗಿದೆ. ಈ ವೇಗ ಮುಂದುವರೆದರೆ ನಾಳೆ ವೇಳೆಗೆ 100 ಅಡಿಗೆ ತಲುಪುವ ಸಾಧ್ಯತೆಗಳಿವೆ ಎಂದು ಜಲವಿದ್ಯುತ್ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕೆಆರ್‌ಎಸ್ ಡ್ಯಾಂನ ಸಂಪೂರ್ಣ ಜಲಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಇದ್ದು, ಪ್ರಸ್ತುತ 21.282 ಟಿಎಂಸಿ ನೀರು ಸಂಗ್ರಹವಾಗಿದೆ. ಈಗಾಗಲೇ ಜಲಾಶಯದಿಂದ 630 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಇನ್ನಷ್ಟು ಮಳೆ ಮುಂದುವರೆದರೆ ನೀರಿನ ನಿರ್ವಹಣೆಗಾಗಿ ನಿಯಂತ್ರಿತವಾಗಿ ಹೊರಹರಿವು ಹೆಚ್ಚಾಗುವ ಸಾಧ್ಯತೆಗಳಿವೆ.