ಬೆಂಗಳೂರು: “ಪ್ರತಿಭೆ ಯಾರದೇ ಸ್ವತ್ತಲ್ಲ. ಅವಕಾಶ ಸಿಕ್ಕರೆ ಎಲ್ಲರೊಳಗಿನ ಪ್ರತಿಭೆ ಹೊರಬರುತ್ತದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು. ಶಾಲಾ ಶೈಕ್ಷಣಿಕ ವರ್ಷದ ಪುನರಾರಂಭದ ಪ್ರಯುಕ್ತ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದ ಸರ್ಕಾರದ ಕನ್ನಡ ಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಶಾಲಾ ಕೊಠಡಿಗಳನ್ನು ಪರಿಶೀಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಮಾತನಾಡಿದರು. “ಸರ್ವರಿಗೂ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಶಿಕ್ಷಣ ಕೇವಲ ಪುಸ್ತಕದ ಜ್ಞಾನವಷ್ಟೇ ಅಲ್ಲ, ಇದು ವ್ಯಕ್ತಿತ್ವವನ್ನು ರೂಪಿಸುತ್ತೆ” ಎಂದು ಅವರು ಹೇಳಿದರು.
ಡಾ. ಬಿ. ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಸ್ಮರಿಸಿದ ಅವರು, “ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ನಮಗೆ ಸಮಾನ ಅವಕಾಶ, ನ್ಯಾಯ ಹಾಗೂ ಮುಕ್ತ ಸಮಾಜದ ಕನಸು ನೀಡಿದೆ. ಜಾತಿ ಮತ್ತು ವರ್ಗ ರಹಿತ ಸಮಾಜ ನಿರ್ಮಾಣವೇ ಅವರ ಆಶಯವಾಗಿತ್ತು” ಎಂದರು.
“ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿದಾಗ ಮಾತ್ರ ಅವರು ಚೆನ್ನಾಗಿ ಓದಬಹುದು. ಈ ಕಾರಣಕ್ಕಾಗಿ ಸರ್ಕಾರ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಹಾಲು ಕೊಡುತ್ತಿದ್ದೇವೆ. ಜೊತೆಗೆ ಸಮವಸ್ತ್ರ, ಪಠ್ಯಪುಸ್ತಕಗಳು, ಶೂ ಮತ್ತು ಸಾಕ್ಸ್ ಮುಂತಾದವನ್ನೂ ನೀಡುತ್ತಿದೆ” ಎಂದು ಸಿಎಂ ತಿಳಿಸಿದರು.
“ಈ ವರ್ಷವೂ ಶಾಲಾ ಕಟ್ಟಡ ನಿರ್ಮಾಣಕ್ಕೆ ₹725 ಕೋಟಿ ಅನುದಾನ ನೀಡಲಾಗಿದೆ. ಕಳೆದ ವರ್ಷವೂ ಅನುದಾನ ನೀಡಿದ್ದೆವು. ಸರ್ಕಾರಿ ಶಾಲೆಗಳು ಗುಣಮಟ್ಟದಲ್ಲಿ ಹಿಂದುಳಿದಿಲ್ಲ” ಎಂದು ಅವರು ಹೇಳಿದರು.
“ಮಕ್ಕಳು ಎಷ್ಟು ಭಾಷೆ ಕಲಿತರೂ ಒಳ್ಳೆಯದೆ. ಆದರೆ, ಕನ್ನಡದಲ್ಲಿ ಅವರ ಶಿಕ್ಷಣ ಪ್ರಾರಂಭವಾಗಬೇಕು. ಕನ್ನಡದಲ್ಲಿ ಕಲಿತರೆ ಪ್ರತಿಭೆ ಕುಂಠಿತವಾಗುತ್ತದೆ ಎಂಬುದೊಂದು ತಪ್ಪು ಕಲ್ಪನೆ. ವೈಜ್ಞಾನಿಕ ಗುಣಮಟ್ಟ ಹೊಂದಿದ ಶಿಕ್ಷಣದಿಂದ ಮಕ್ಕಳಲ್ಲಿ ಪ್ರತಿಭೆ ಪ್ರಕಾಶಮಾನವಾಗುತ್ತದೆ” ಎಂದು ಸಿದ್ದರಾಮಯ್ಯ ತಿಳಿಸಿದರು.
ಇನ್ನೂ ಮುಂದೆ ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ಗಳ ಅವಲಂಬನೆಯಿಲ್ಲದೆ ಉತ್ತಮ ಅಂಕಗಳನ್ನು ಗಳಿಸಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ದುಡಿಯುತ್ತಿದೆ. “ಇದಕ್ಕೂ ಪೂರಕವಾಗಿ ಎರಡನೇ ಮತ್ತು ಮೂರನೇ ಸಪ್ಲಿಮೆಂಟರಿ ಪರೀಕ್ಷೆಗಳಿಗೆ ಯಾವುದೇ ಶುಲ್ಕವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಸಚಿವ ರಾಮಲಿಂಗಾರೆಡ್ಡಿಯವರ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟ ಹೊಂದಿವೆ ಎಂಬುದನ್ನು ಮೆಚ್ಚಿದ ಸಿಎಂ, ಇಂತಹ ಗುಣಮಟ್ಟ ಇಡೀ ರಾಜ್ಯದಲ್ಲಿ ಪ್ರಬಲವಾಗಿ ಉಂಟಾಗಬೇಕು ಎಂದು ಕರೆ ನೀಡಿದರು.














