ಬೆಂಗಳೂರು: ಬಿಜೆಪಿಯಿಂದ ಉಚ್ಚಾಟನೆಗೊಂಡ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಾನು ಅವರಿಗೆ ಬಿಜೆಪಿಗೆ ಹೋಗಬೇಡಿ ಅಂತ ಹೇಳಿದ್ದೆ. ಈಗ ಅವರು ತಾವು ತಪ್ಪು ಮಾಡಿದಂತೆ ಅನುಭವಿಸುತ್ತಿದ್ದಾರೆ. ಕೆಲವರು ‘ನಮ್ಮನ್ನು ಸಾಯಿಸ್ತೀದ್ದಾರೆ’ ಎಂದು ಸಹ ಹೇಳಿದ್ದಾರೆ,” ಎಂದು ವ್ಯಂಗ್ಯವಾಡಿದರು.
ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದವರ ಸ್ಥಿತಿಗತಿ ಹೇಗಿದೆ ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದರು. “ಸಿಪಿ ಯೋಗೇಶ್ವರ್ ಈಗ ಮತ್ತೆ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಎಮ್.ಟಿ.ಬಿ. ನಾಗರಾಜ್, ಶ್ರೀಮಂತ್ ಪಾಟೀಲ್, ಮಹೇಶ್ ಕುಮ್ಟಳ್ಳಿ ಇವರೆಲ್ಲರನ್ನೂ ನೋಡಿ — ಅವರ ಸ್ಥಿತಿ ಏನಾಗಿದೆ?” ಎಂದು ಪ್ರಶ್ನಿಸಿದರು.
ಜೆಡಿಎಸ್ ಪಕ್ಷವನ್ನು ಕುಟುಂಬ ರಾಜಕಾರಣದ ಪಕ್ಷವೆಂದು ತೀವ್ರವಾಗಿ ಟೀಕಿಸಿದ ಅವರು, “ಜಾತಿ ರಾಜಕಾರಣವೇ ಅಲ್ಲಿದೆ. ದೇವೇಗೌಡರ ಅಳಿಯನನ್ನು ಕರೆದು ಬಿಜೆಪಿ ಎದುರು ನಿಲ್ಲಿಸಿದ್ರು. ನಾವೂ ತಂತ್ರ ಮಾಡೋದು ಗೊತ್ತಿದೆ. ಹಾಸನದಲ್ಲಿ 7 ಕ್ಷೇತ್ರಗಳಲ್ಲೂ ಗೆಲ್ಲೋದು ನಮ್ಮ ಗುರಿ” ಎಂದರು.
ಡಿಕೆಶಿ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಹತ್ಯೆ ಪ್ರಕರಣದ ಕುರಿತು ಮಾತನಾಡುತ್ತಾ, “ಮಂಗಳೂರಲ್ಲಿ ಧರ್ಮ ಜಾತಿ ಹೆಸರಿನಲ್ಲಿ ಗಲಾಟೆ ನಡೆಸಲಾಗುತ್ತಿದೆ. ಅಲ್ಲಿನ ಯುವಕರು ದುಬೈ, ಬೆಂಗಳೂರು ಕಡೆಗೆ ವಲಸೆ ಹೋಗುತ್ತಿದ್ದಾರೆ. ಹಿಂಸೆ ಯಾರಿಗೂ ಹಿತವಲ್ಲ. ಬಿಜೆಪಿ ಕತ್ತರಿ ಇದ್ದಂತೆ, ನಾವು ಸೂಜಿ ಇದ್ದಂತೆ – ನಾವು ಹೊಲಿಯುವ ಕೆಲಸ ಮಾಡುತ್ತೇವೆ” ಎಂದರು.














