ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಆರ್ಭಟ ಮುಂದುವರೆದಿದೆ. ನಿನ್ನೆ ಕೋವಿಡ್ ನಿಂದಾಗಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ನಿನ್ನೆ ಒಂದೇ ದಿನ 42 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಟ್ಟು 513 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲೂ 463 ಜನರಿಗೆ ಆರ್‌ಟಿ-ಪಿಸಿಆರ್ ಮೂಲಕ ಮತ್ತು 50 ಮಂದಿಗೆ ರ್ಯಾಪಿಡ್ ಟೆಸ್ಟ್ (RAT) ಮೂಲಕ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 42 ಜನರಿಗೆ ಪಾಸಿಟಿವ್ ವರದಿ ಬಂದಿದೆ.
ಪ್ರಸ್ತುತ ರಾಜ್ಯದಲ್ಲಿ 42 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 33 ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ, 3 ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ 6 ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್ ಸೋಂಕಿನಿಂದ ರಾಜ್ಯದಲ್ಲಿ ಮತ್ತೊಬ್ಬರು ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ದೃಢಪಡಿಸಿದೆ.
ಜ್ವರ, ಗಂಟಲು ನೋವು, ಶ್ವಾಸದ ತೊಂದರೆ ಇರುವವರು ತಕ್ಷಣ ತಪಾಸಣೆಗೊಳಪಡಬೇಕು ಹಾಗೂ ಹೋಂ ಐಸೋಲೇಶನ್ ಅಥವಾ ವೈದ್ಯಕೀಯ ಮಾರ್ಗದರ್ಶನ ಪಡೆಯಬೇಕು. ಸಾರ್ವಜನಿಕರು ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು, ಭೌತಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಹೈಜಿನ್ ಪಾಲಿಸುವುದು ಬಹುಮುಖ್ಯವಾಗಿದೆ.














