ಬೆಂಗಳೂರು: ಕನ್ನಡ ಭಾವಗೀತೆಗಳ ಭವ್ಯ ಪರಂಪರೆಯ ಪ್ರತಿನಿಧಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ (ಹೆಚ್‌ಎಸ್‌ವಿ) ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಂತಾಪ ವ್ಯಕ್ತಪಡಿಸಿದ್ದಾರೆ.
“ಡಾ. ಹೆಚ್‌ಎಸ್‌ವಿ ಕೇವಲ ಕವಿ ಅಲ್ಲ, ಅವರು ನಾಟಕಕಾರ, ಅಂಕಣಕಾರ, ಅನುವಾದಕ, ಮಕ್ಕಳ ಸಾಹಿತ್ಯದ ಚೇತನ. ತಾವು ಬರೆದ ‘ತೂಗು ಮಂಚದಲ್ಲಿ’, ‘ಅಮ್ಮ ನಾನು ದೇವರಾಣೆ’, ‘ಲೋಕದ ಕಣ್ಣಿಗೆ ರಾಧೆಯು ಕೂಡ’ ಎಂಬಂತೆ ಅನೇಕ ಭಾವಗೀತೆಗಳು ಇಂದಿಗೂ ನಮ್ಮ ಮನಸ್ಸುಗಳಲ್ಲಿ ಜೀವಂತವಾಗಿವೆ” ಎಂದು ತಂಗಡಗಿ ನೆನಪಿಸಿದರು. ಇಂತಹ ಗೀತೆಗಳನ್ನು ಕೊಟ್ಟ ಕವಿ ನಮ್ಮನ್ನು ಇಂದು ಅಗಲಿದ್ದಾರೆ.
ನೂರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಹೆಚ್‌ಎಸ್‌ವಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಯಶಸ್ವಿಯಾದವರು. ‘ಬುದ್ಧ ಚರಣ’ ಮಹಾಕಾವ್ಯದ ಮೂಲಕ ಅವರು ಸಾಹಿತ್ಯದ ಮತ್ತೊಂದು ಮಜಲನ್ನು ಸ್ಪರ್ಶಿಸಿದ್ದಾರೆ ಎಂದು ಹೇಳಿದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ನೂರಾರು ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದ ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಮಹತ್ವದ ಚೇತನವೊಂದನ್ನು ಕಳೆದುಕೊಂಡಿದೆ.
“ಅವರ ಗಾನರೂಪದ ಕವನಗಳು ಶಾಶ್ವತವಾಗಿವೆ. ಇಂತಹ ಸೃಜನಶೀಲತೆಯ ಪ್ರತಿಮೆಯ ಅಗಲಿಕೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ತುಂಬಲಾರದ ನಷ್ಟ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ಒದಗಿಸಲಿ” ಎಂದು ತಂಗಡಗಿ ಅವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.














