ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಗಳ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ತೊಡಗಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಂಗಳೂರು ಸಂಚಾರ ವಿಭಾಗದ ಇಬ್ಬರು ಕಾನ್ಸ್ಟೇಬಲ್ಗಳು ಐಪಿಎಲ್ ಟಿಕೆಟ್ಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡುತ್ತಿದ್ದರೆಂದು ಪತ್ತೆಹಚ್ಚಲಾಗಿದ್ದು, ಇದೀಗ ಇಬ್ಬರೂ ಅಮಾನತುಗೊಂಡಿದ್ದಾರೆ.
ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಅವರು ಈ ಕುರಿತು ಕ್ರಮ ಕೈಗೊಂಡಿದ್ದು, ಹಲಸೂರು ಸಂಚಾರಿ ಠಾಣೆಯ ಕಾನ್ಸ್ಟೇಬಲ್ ರವಿಚಂದ್ರ ಮತ್ತು ಟಿಎಮ್ಸಿ ಸಿಬ್ಬಂದಿ ವೆಂಕಟಗಿರಿಗೌಡ ಅವರನ್ನು ತಕ್ಷಣದ ಪರಿಣಾಮದಿಂದ ಅಮಾನತುಗೊಳಿಸಿದ್ದಾರೆ. ಇವರ ವಿರುದ್ಧ ಇದೀಗ ಇಲಾಖಾ ತನಿಖೆ ಆರಂಭಿಸಲಾಗಿದೆ.
ಘಟನೆ ಮೇ 17ರಂದು ನಡೆದ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಐಪಿಎಲ್ ಪಂದ್ಯದ ವೇಳೆ ವಿಜಯನಗರದ ಪಾರ್ಕ್ ಬಳಿ ಟಿಕೆಟ್ಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಪೊಲೀಸರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದರು.
ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ 61 ಐಪಿಎಲ್ ಟಿಕೆಟ್ಗಳು ಹಾಗೂ ₹20,000 ನಗದು ವಶಕ್ಕೆ ಪಡೆಯಲಾಗಿದೆ. ಟಿಕೆಟ್ ದಂಧೆಯಲ್ಲಿ ಭಾಗಿಯಾಗಿದ್ದ ಶಂಕರ್ ಮತ್ತು ಸುರೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.
ಕಾನ್ಸ್ಟೇಬಲ್ ರವಿಚಂದ್ರ ಹಾಗೂ ವೆಂಕಟಗಿರಿಗೌಡನನ್ನು ಬಂಧಿಸದೆ ಇಬ್ಬರಿಗೂ ಕೇವಲ ನೋಟಿಸ್ ನೀಡಿ ಬಿಟ್ಟಿದ್ದರು. ಸದ್ಯ ಕಾನ್ಸ್ಟೇಬಲ್ ಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆಗೆ ಆದೇಶ ಹೊರಡಿಸಲಾಗಿದೆ.














