ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಇದೀಗ ಗಂಭೀರ ಎಚ್ಚರಿಕೆ ತೆಗೆದುಕೊಂಡಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ನೂತನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಶಾಲಾ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ.
ಕೊರೊನಾ, ಡೆಂಗ್ಯೂ ಹಾಗೂ ಇತರ ವೈರಲ್ ಸೋಂಕುಗಳು ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಈ ಸಂದರ್ಭದಲ್ಲಿ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ನಿಗಾ ವಹಿಸಬೇಕೆಂಬ ಅಗತ್ಯತೆಯಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಆಯುಕ್ತ ಡಾ. ಶಿವಕುಮಾರ್ ಅವರಿಂದ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ.
ಆರೋಗ್ಯ ಇಲಾಖೆಯ ಮಾರ್ಗಸೂಚಿಗಳ ಪ್ರಮುಖ ಅಂಶಗಳು:
- ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಮೊದಲಾದ ಕೋವಿಡ್ ಗುರ್ತಿನ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಶಾಲೆಗೆ ಕಳುಹಿಸಬಾರದು.
- ವಿದ್ಯಾರ್ಥಿಗಳು ಸಂಪೂರ್ಣವಾಗಿ ಗುಣಮುಖರಾದ ಮೇಲೆ ಮಾತ್ರ ಶಾಲೆಗೆ ಹಾಜರಾಗಲು ಅವಕಾಶ ನೀಡಬೇಕು.
- ಶಾಲೆಗೆ ಬಂದ ಮಕ್ಕಳಲ್ಲಿ ಕೋವಿಡ್ ಸಂಬಂಧಿತ ಲಕ್ಷಣಗಳು ಕಂಡುಬಂದರೆ ತಕ್ಷಣ ಪೋಷಕರಿಗೆ ಮಾಹಿತಿ ನೀಡಿ ಮನೆಗೆ ಕಳುಹಿಸಬೇಕು.
- ಶಾಲಾ ಸಿಬ್ಬಂದಿಯಲ್ಲೂ ಸಮಾನ ಲಕ್ಷಣಗಳು ಕಂಡುಬಂದರೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಸೂಚನೆಯಂತೆ ಕ್ರಮ ಕೈಗೊಳ್ಳಬೇಕು.
- ಶಾಲೆಗಳಲ್ಲಿ ಸ್ವಚ್ಛತೆ ಪಾಲನೆ, ಕೈ ತೊಳೆಯುವ ವ್ಯವಸ್ಥೆ, ಹಾಗೂ ಕೋವಿಡ್ ನಿಯಮ ಪಾಲಿಸಬೇಕು.
ಮಕ್ಕಳ ಆರೋಗ್ಯಕ್ಕಾಗಿ ಶಾಲಾ ಆಡಳಿತ ಮಂಡಳಿಗಳು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನೂ ಪಾಲಿಸುವ ಜವಾಬ್ದಾರಿ ಹೊಂದಿವೆ.














