ದೇವನಹಳ್ಳಿ: ಸಾಂಬಾರ್ ವಿಚಾರಕ್ಕೆ ದಂಪತಿ ನಡುವೆ ಉಂಟಾದ ಕಲಹ ಪತ್ನಿ ಸಾವಿನಲ್ಲಿ ಅಂತ್ಯವಾಗಿರುವಂತಹ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರತ್ನ (38) ಸಾವನ್ನಪಿದ ಗೃಹಿಣಿ. ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಆಗಿದೆ.
ಈ ದುರ್ಘಟನೆ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಹಿಂದಿನ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೊಟ್ಟ ಮೊದಲಿಗೆ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದರೂ, ಇದೀಗ ಪತ್ನಿಯ ತವರು ಮನೆಯವರು ಇದು ನಿಖರವಾಗಿ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಾಗರತ್ನ ಅವರ ಅಣ್ಣ ಹಾಗೂ ತಾಯಿ – ಇಬ್ಬರೂ ಅವರ ಸಾವಿಗೆ ಪತಿಯೇ ಹೊಣೆ ಎಂದು ದೂರಿದ್ದಾರೆ. ಅವರು ನೀಡಿದ ದೂರಿನ ಪ್ರಕಾರ, ಪತಿ ಹಣಕಾಸಿನ ವಿಚಾರಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದು, ಇದರ ಫಲವಾಗಿ ಈ ಹತ್ಯೆ ನಡೆದಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಆದರೆ, ಪತಿಯ ಹೇಳಿಕೆ ಪ್ರಕಾರ, ಸಾಂಬಾರ್ ತಯಾರಿಕೆಯಲ್ಲಿ ಸಂಭವಿಸಿದ ಸಣ್ಣ ಪುಟ್ಟ ಮಾತಿಗೆ ಗಂಡ-ಹೆಂಡತಿ ನಡುವೆ ಜಗಳ ಉಂಟಾಗಿತ್ತು. ಜಗಳದ ಬಳಿಕ ಪತ್ನಿ ತನ್ನ ಕೋಣೆಗೆ ಹೋಗಿದ್ದು, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ಅವರು ತಿಳಿಸಿದ್ದಾರೆ. ಅವರ ಮಕ್ಕಳು ಸಹ ಇದೇ ಹೇಳಿಕೆಯನ್ನು ಬೆಂಬಲಿಸಿದ್ದಾರೆ.














