ಹೈದರಾಬಾದ್: ಆನಂದ ಮತ್ತು ಭಕ್ತಿಯಿಂದ ಕಂಗೊಳಿಸುತ್ತಿದ್ದ ಉತ್ಸವ ಕ್ಷಣಾರ್ಧದಲ್ಲಿ ಆಘಾತದ ವಾತಾವರಣಕ್ಕೆ ತಿರುಗಿದ ದುರಂತ ಘಟನೆ ಜಂಟಿ ನೆಲ್ಲೂರು ಜಿಲ್ಲೆಯ ವೆಂಕಟಗಿರಿಯ ಬೆಸ್ತಪಲೆಂ ಬೀದಿಯಲ್ಲಿ ನಡೆದಿದೆ. ಶ್ರೀ ಕಾವಮ್ಮ ತಲ್ಲಿ ಉತ್ಸವದ ವೇಳೆ ದೇವಿಯ ಮೆರವಣಿಗೆಯು ಸಾಗುತ್ತಿರುವಾಗ ಪೂಜಾರಿಯೊಬ್ಬರು ನೃತ್ಯ ಮಾಡುತ್ತಾ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಕ್ತರಲ್ಲಿ ಭಾರೀ ಆಘಾತ ಉಂಟುಮಾಡಿದೆ.
ಹೃದಯಾಘಾತದಿಂದ ಮೃತರಾದವರು ಈ ಉತ್ಸವದ ಮುಖ್ಯ ಆಯೋಜಕರಾಗಿದ್ದ ಗುರ್ರಂ ಶೋಭನ್ ಬಾಬು. ಅವರು ಮೆರವಣಿಗೆಯಲ್ಲಿ ತಾಂಡವ ನೃತ್ಯ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಹೃದತಾಘಾತದಿಂದ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ದೇವಿಯ ವಾಹನದ ಮುಂದೆ ಶೋಭನ್ ಬಾಬು ತಾಂಡವವಾಡುತ್ತಿರುವ ದೃಶ್ಯಗಳು ಹಾಗೂ ಬಳಿಕ ಅವರು ಏಕಾಏಕಿ ಕುಸಿದು ಬಿದ್ದ ದೃಶ್ಯಗಳು ಸೆರೆಸಿಕ್ಕಿವೆ.
ಸ್ಥಳೀಯರು ಮತ್ತು ಭಕ್ತರು ತಕ್ಷಣವೇ ಶೋಭನ್ ಬಾಬುವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರು. ಶೋಭನ್ ಬಾಬು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ದುರ್ಘಟನೆಯ ನಂತರ ಶೋಭನ್ ಬಾಬು ಅವರ ನಿಧನದ ಸುದ್ದಿಯು ವ್ಯಾಪಕವಾಗಿ ಹರಡಿದ ಕೂಡಲೇ ಉತ್ಸವದ ಉಳಿದ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಯಿತು. ಹಬ್ಬದ ಸಂತಸದಿಂದ ಭರಿತವಾಗಿದ್ದ ಬೆಸ್ತಪಲೆಂ ಬೀದಿ ಕೂಡಲೇ ಶೋಕದ ವಾತಾವರಣಕ್ಕೆ ತಿರುಗಿತು. ಭಕ್ತರು, ಕುಟುಂಬದ ಸದಸ್ಯರು ಮತ್ತು ಊರಿನ ಜನ ಕಣ್ಣೀರಲ್ಲಿ ಮುಳುಗಿದರು.
ಶೋಭನ್ ಬಾಬು ಅವರು ಈ ಉತ್ಸವದ ಪ್ರಮುಖ ಭಾಗಿಯಾಗಿದ್ದರು. ದೇವಿಗೆ ಪ್ರತಿವರ್ಷ ವಿಶೇಷ ಸೇವೆ ಸಲ್ಲಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.














