ಮನೆ ಸುದ್ದಿ ಜಾಲ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ 15 ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು.!

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ 15 ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು.!

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿದ್ದು, ಆರ್‌ಎಸ್‌ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ 15 ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮತ್ತು ಕಾನೂನು ಬಾಹಿರ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಮೇ 12 ರಂದು ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದಲ್ಲಿ ನಡೆದಿದ್ದು, ಪ್ರಕರಣವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ದಾಖಲಿಸಿದೆ.

ಈ ಸಂಬಂಧ ಭಾರತೀಯ ದಂಡ ಸಂಹಿತೆಯ 353(2) ಬಿಎನ್‌ಎಸ್ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ಸಂಭವಿಸಿದ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ನೂತನ ಎಸ್‌ಪಿ ನೇತೃತ್ವದಲ್ಲಿ ಹಿಂದೂ ಸಂಘಟನೆಯ ಮುಖಂಡರ ಮನೆಗಳಿಗೆ ಪೊಲೀಸ್ ಪರಿಶೀಲನೆ ನಡೆದಿದೆ. ಆದರೆ, ಈ ಕ್ರಮದ ವಿರುದ್ಧ ಸಂಘಟನೆಯ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಬ ಪೊಲೀಸ್ ಠಾಣೆ ಎದುರು ಅನಧಿಕೃತವಾಗಿ ಗುಂಪು ಸೇರಿ ಪ್ರತಿಭಟನೆ ನಡೆಸಿದ ಆರೋಪದ ಮೇರೆಗೆ ಕೂಡ ಎಫ್‌ಐಆರ್ ದಾಖಲಾಗಿದೆ. ಪೊಲೀಸ್ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿರುವುದು ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವಂತೆ ವರ್ತಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಎಫ್‌ಐಆರ್ ದಾಖಲಾಗಿರುವ ಪ್ರಮುಖ ಹೆಸರುಗಳು: ಪ್ರಮೋದ್ ರೈ ನಂದಗುರಿ, ತಿಲಕ್ ನಂದಗುರಿ, ಮೋಹನ್ ಕೆರೆಕೋಡಿ, ಚಂದ್ರಶೇಖರ್ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನಂದಗುರಿ, ಶ್ರೇಯತ್, ಉಮೇಶ್, ರಾಧಾಕೃಷ್ಣ, ಜಯಂತ್ ಸೇರಿದಂತೆ ಒಟ್ಟು 15 ಜನರು.

ಈ ಎಫ್‌ಐಆರ್ ವರದಿಯ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಧರ್ಮಾಧಾರಿತ ರಾಜಕೀಯ ಸಂವೇದನೆ ಹೆಚ್ಚಾಗುವ ಸಂಭವವಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಹಿಂದೂ ಸಂಘಟನೆಗಳಲ್ಲಿ ಪ್ರಭಾವಿ ನಾಯಕನಾಗಿದ್ದು, ಅವರ ವಿರುದ್ಧದ ಕ್ರಮ ಹಿಂದೂ ಸಂಘಟನೆಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.