ಮನೆ ರಾಜ್ಯ ಬೆಳಗಾವಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ಐವರು ಆರೋಪಿಗಳ ಬಂಧನ : ಪರಮೇಶ್ವರ್ ಸ್ಪಷ್ಟನೆ

ಬೆಳಗಾವಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ಐವರು ಆರೋಪಿಗಳ ಬಂಧನ : ಪರಮೇಶ್ವರ್ ಸ್ಪಷ್ಟನೆ

0

ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಜನರನ್ನು ಬಂಧನ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, “ಈ ಘಟನೆ 2024ರ ಡಿಸೆಂಬರ್ ಮತ್ತು 2025ರ ಜನವರಿಯಲ್ಲಿ ನಡೆದಿದ್ದು, ಆ ಸಮಯದಲ್ಲಿ ಯಾರಿಂದಲೂ ದೂರು ದಾಖಲಿಸಲಾಗಿರಲಿಲ್ಲ. ಇದೀಗ ದೂರು ಬಂದ ಹಿನ್ನೆಲೆಯಲ್ಲಿ, ಅದರ ಆಧಾರದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬೆಳಗಾವಿ ಪೊಲೀಸ್ ಆಯುಕ್ತರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಎಪಿಎಂಸಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಗಳಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಒಬ್ಬ ಆರೋಪಿ ಬಾಲಕಿಯನ್ನು ಸ್ನೇಹಿತನಾಗಿ ಪರಿಚಯಿಸಿಕೊಂಡು, ನಂತರ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ, ಆತನ ಗೆಳೆಯರು ಕೂಡ ಸೇರಿಕೊಂಡು, ಬೇರೆ ಬೇರೆ ಸಮಯದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಅತ್ಯಾಚಾರದ ದೃಶ್ಯವನ್ನು ಆರೋಪಿಗಳು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದು, ಅದನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು ಸಹ ತನಿಖೆಯಲ್ಲಿ ಬಹಿರಂಗವಾಗಿದೆ. 2025ರ ಜನವರಿಯಲ್ಲಿ ಮತ್ತೆ ಮೂವರು ಅತ್ಯಾಚಾರ ಮಾಡಿದ್ದಾರೆ ಎಂದು ವರದಿಯಾಗಿದೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ಮಾತನಾಡುತ್ತಾ, “ಬಾಲಕಿ ಮೇಲೆ ನಡೆದ ಅಪರಾಧದ ವಿಚಾರದಲ್ಲಿ ನಾವು ಅತ್ಯಂತ ಗಂಭೀರವಾಗಿ ತನಿಖೆ ನಡೆಸುತ್ತಿದ್ದೇವೆ. ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ನಡೆದಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಎಲ್ಲಾ ರೀತಿಯ ಪುರಾವೆಗಳನ್ನೂ ಸಂಗ್ರಹಿಸಲಾಗುತ್ತಿದೆ” ಎಂದು ಹೇಳಿದರು.