ಮನೆ ಕ್ರೀಡೆ ‘ಈ ಸಲ ಕಪ್ ನಮ್ದೇ’ : ಆರ್​​ಸಿಬಿ ಜೆರ್ಸಿ ತೊಟ್ಟು ಡಿಸಿಎಂ ಡಿ.ಕೆ. ಶಿವಕುಮಾರ್ ತಂಡಕ್ಕೆ...

‘ಈ ಸಲ ಕಪ್ ನಮ್ದೇ’ : ಆರ್​​ಸಿಬಿ ಜೆರ್ಸಿ ತೊಟ್ಟು ಡಿಸಿಎಂ ಡಿ.ಕೆ. ಶಿವಕುಮಾರ್ ತಂಡಕ್ಕೆ ಶುಭ ಹಾರೈಕೆ

0

ಬೆಂಗಳೂರು: ಐಪಿಎಲ್ 2025ರ ಬಹು ನಿರೀಕ್ಷಿತ ಫೈನಲ್ ಪಂದ್ಯ ಇಂದು ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​​ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳು ಕಾದಾಟಕ್ಕೆ ಇಳಿಯಲಿವೆ. ಈ ಮಹತ್ವದ ಸಂದರ್ಭದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಆರ್‌ಸಿಬಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಆರ್‌ಸಿಬಿ ಜೆರ್ಸಿ ಧರಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.

“ಈ ಸಲ ಕಪ್ ನಮ್ದೇ” ಎಂಬ ಘೋಷವಾಕ್ಯದೊಂದಿಗೆ ಡಿಸಿಎಂ ಶಿವಕುಮಾರ್ ನೀಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಆರ್‌ಸಿಬಿ ಜೆರ್ಸಿ ತೊಟ್ಟು, ನಗುತ್ತಾ, ಆತ್ಮೀಯವಾಗಿ ಮಾತನಾಡಿದ್ದಾರೆ. “ಇದೀಗ ಮತ್ತೊಂದು ಅವಕಾಶ. ಕಳೆದ 18 ವರ್ಷಗಳಿಂದ ಆರ್‌ಸಿಬಿ ಗೆಲುವಿಗಾಗಿ ಕಾಯುತ್ತಿದ್ದೇವೆ. ಇಡೀ ಕರ್ನಾಟಕ ಮಾತ್ರವಲ್ಲ, ಭಾರತವೂ ನಿಮ್ಮೊಂದಿಗಿದೆ. ಈ ಸಲ ಚಾಂಪಿಯನ್‌ಶಿಪ್ ನಿಮ್ಮದೇ ಆಗಲಿ” ಎಂದು ಅವರು ಹಾರೈಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಆರ್‌ಸಿಬಿಗೆ ಶುಭ ಹಾರೈಸಿದ ಹಿನ್ನೆಲೆಯಲ್ಲಿ ಡಿಸಿಎಂ ಅವರ ಈ ಸಂದೇಶವೂ ಹೆಚ್ಚಿನ ಗಮನ ಸೆಳೆದಿದೆ. ರಾಜ್ಯದ ಉನ್ನತ ಮಟ್ಟದ ನಾಯಕರು ಆರ್​​ಸಿಬಿ ಗೆ ಹಾರೈಸುತ್ತಿರುವುದು, ಈ ಪಂದ್ಯ ಯಾವ ಮಟ್ಟದ ಭಾವನಾತ್ಮಕ ಹೂಡಿಕೆಗೆ ಕಾರಣವಾಗಿದೆಯೆಂಬುದನ್ನು ಸ್ಪಷ್ಟಪಡಿಸುತ್ತದೆ.

ಡಿಸಿಎಂ ಅವರ ಈ ವಿಡಿಯೋವನ್ನು ಹಲವಾರು ರಾಜಕೀಯ ಮುಖಂಡರು, ಕ್ರಿಕೆಟ್ ಅಭಿಮಾನಿಗಳು, ಆರ್​​ಸಿಬಿ ಫ್ಯಾನ್ಸ್ ಕ್ಲಬ್‌ಗಳು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ “#ThisTimeRCB” ಮತ್ತು “#CupNamde” ಹ್ಯಾಶ್‌ಟ್ಯಾಗ್‌ಗಳ ಮೂಲಕ ಅಭಿಮಾನಿಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.