ಧಾರವಾಡ: ಧಾರವಾಡ ಜಿಲ್ಲೆಯಲ್ಲೊಂದು ಭೀಕರ ದುರಂತ ಸಂಭವಿಸಿದ್ದು, ಬೋರ್ವೆಲ್ ತಂತಿ ಕಂಬಕ್ಕೆ ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ರೈತನೊಬ್ಬನು ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಈ ದುರ್ಘಟನೆ ಧಾರವಾಡದ ಕಲಿಕೇರಿ ಮತ್ತು ಮುಗದ ಗ್ರಾಮದ ನಡುವಿನ ಜಮೀನಿನಲ್ಲಿ ಸಂಭವಿಸಿದೆ. ನಿಂಗಪ್ಪ (ವಯಸ್ಸು 50) ಎಂಬ ರೈತನು ತಮ್ಮ ಕೃಷಿ ಜಮೀನಿನಲ್ಲಿ ಬೋರ್ವೆಲ್ ಪಂಪ್ಗೆ ತಂತಿ ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತಂತಿಯನ್ನು ವಿದ್ಯುತ್ ಕಂಬಕ್ಕೆ ಜೋಡಿಸುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲೇ ಸಾವಿಗೀಡಾದರು ಎಂದು ಪ್ರಾಥಮಿಕ ಮಾಹಿತಿ ತಿಳಿಸುತ್ತದೆ.
ಘಟನೆ ಸಂಭವಿಸಿದ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ನಿಂಗಪ್ಪನನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ವಿದ್ಯುತ್ ಶಾಕ್ನ ತೀವ್ರತೆಗೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಈ ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.














