ಮನೆ ಸುದ್ದಿ ಜಾಲ ಆರ್‌ಸಿಬಿ ವಿಜಯೋತ್ಸವ ವೇಳೆ ಹೃದಯಾಘಾತ : 25 ವರ್ಷದ ಅಭಿಮಾನಿಯ ದಾರುಣ ಸಾವು

ಆರ್‌ಸಿಬಿ ವಿಜಯೋತ್ಸವ ವೇಳೆ ಹೃದಯಾಘಾತ : 25 ವರ್ಷದ ಅಭಿಮಾನಿಯ ದಾರುಣ ಸಾವು

0

ಮೂಡಲಗಿ: ಐಪಿಎಲ್ 2025 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐತಿಹಾಸಿಕ ಜಯವನ್ನು ಸಿಹಿಯಾಗಿ ಆಚರಿಸುತ್ತಿದ್ದ ಅಭಿಮಾನಿಯೊಬ್ಬ, ಕುಣಿದಾಡುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ ಕುಂಬಾರ್ (25), ಸ್ಥಳೀಯ ಯುವಕನಾಗಿದ್ದು, ಆರ್‌ಸಿಬಿ ತಂಡದ ದೊಡ್ಡ ಅಭಿಮಾನಿಯಾಗಿದ್ದರು. ಮಂಗಳವಾರ ನಡೆದ ಫೈನಲ್‌ನಲ್ಲಿ ಆರ್‌ಸಿಬಿ ಗೆದ್ದ ನಂತರ ತಮ್ಮ ಸ್ನೇಹಿತರು ಮತ್ತು ಗ್ರಾಮಸ್ಥರೊಂದಿಗೆ ವಿಜಯೋತ್ಸವ ಆಚರಿಸುತ್ತಿದ್ದರು.

ಈ ವೇಳೆ ಮಂಜುನಾಥ್ ಟ್ರ‍್ಯಾಕ್ಟರ್‌ನಲ್ಲಿ ಹಾಡು ಹಾಕಿ ಕುಣಿಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಮಂಜುನಾಥ್ ಸಾವನ್ನಪ್ಪಿದ್ದಾನೆ. ಮೂಡಲಗಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ದುರ್ಘಟನೆ ಗ್ರಾಮಸ್ಥರಲ್ಲಿ ಶೋಕ ಆವರಿಸಿದ್ದು, ಯುವಕನ ಅಕಾಲಿಕ ಮರಣಕ್ಕೆ ಎಲ್ಲರೂ ದುಃಖ ವ್ಯಕ್ತಪಡಿಸಿದ್ದಾರೆ.