ಬೆಂಗಳೂರು: ಆರ್‌ಸಿಬಿ ತಂಡ ಐಪಿಎಲ್ 2025 ಟ್ರೋಫಿಯನ್ನು ಗೆದ್ದ ಸಂಭ್ರಮದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತದ ಕುರಿತು ನಟಿ ರಮ್ಯಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (ಹಳೆಯ ಟ್ವಿಟರ್) ಮೂಲಕ ಅವರು ಪ್ರತಿಕ್ರಿಯಿಸಿ, “ಸಂಭ್ರಮಾಚರಣೆ ಒಂದು ಭಯಾನಕ ದುರಂತವಾಗಿ ಮಾರ್ಪಟ್ಟಿದೆ. ಇದು ನಿಜಕ್ಕೂ ಹೃದಯ ವಿದ್ರಾವಕ” ಎಂದು ಭಾವುಕರಾಗಿ ಹೇಳಿದ್ದಾರೆ.
ಆರ್‌ಸಿಬಿ ಅವರ ಐತಿಹಾಸಿಕ ಗೆಲುವಿನ ಬಳಿಕ ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರುವ ಮೂಲಕ ಭಾರೀ ಜನಸಂದಣಿ ಉಂಟಾಯಿತು. ಈ ಪರಿಸ್ಥಿತಿಯಲ್ಲಿ ನಿಯಂತ್ರಣ ತಪ್ಪಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಟಿ ರಮ್ಯಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಂತೆ, “ಈ ದುರಂತ ನನಗೆ ತುಂಬಾ ನೋವು ತಂದಿದೆ. ಆರ್‌ಸಿಬಿ ಗೆಲುವು ಎಲ್ಲರಿಗೂ ಸಂತೋಷ ತಂದರೂ, ಇಂತಹ ದುಃಖದ ಘಟನೆ ನಡೆಯಬಾರದಿತ್ತು ಎಂದು ತಿಳಿಸಿದ್ದಾರೆ.














