ಮನೆ ರಾಜ್ಯ ಮಧು ಜಿ.ಮಾದೇಗೌಡರ ಗೆಲುವಿಗೆ ವೈಯುಕ್ತಿಕ ಪ್ರಯತ್ನ ಕಾರಣ: ಪ್ರತಾಪ್ ಸಿಂಹ

ಮಧು ಜಿ.ಮಾದೇಗೌಡರ ಗೆಲುವಿಗೆ ವೈಯುಕ್ತಿಕ ಪ್ರಯತ್ನ ಕಾರಣ: ಪ್ರತಾಪ್ ಸಿಂಹ

0

ಮೈಸೂರು(Mysuru):  ವಿಧಾನಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮಧು ಜಿ.ಮಾದೇಗೌಡ ಗೆಲುವಿಗೆ ಅವರ ವೈಯಕ್ತಿಕ ಪ್ರಯತ್ನ ಬಹಳ ನೆರವಾಗಿದೆಯೇ ಹೊರತು, ಇದು ಕಾಂಗ್ರೆಸ್‌ ಗೆಲುವಲ್ಲ ಎಂದು ಸಂಸದ ಬಿಜೆಪಿಯ ಪ್ರತಾಪ ಸಿಂಹ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿ, ಮತದಾರರಾಗಿದ್ದ ಪದವೀಧರರು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಖ ನೋಡಿ ಮತ ಹಾಕಿಲ್ಲ. ಅಲ್ಲದೇ, ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಕೂಡ ಕೈ ಜೋಡಿಸಿದ್ದರಿಂದ ಮಧುಗೆ ನೆರವಾಗಿದೆ  ಎಂದು ಹೇಳಿದರು.

ಪಕ್ಷದ ಅಭ್ಯರ್ಥಿಯಾಗಿದ್ದ ಮೈ.ವಿ. ರವಿಶಂಕರ್‌ ಹಳೆಯ ಕಾರ್ಯಕರ್ತ. ನಮ್ಮೆಲ್ಲರ ಗೆಲುವಿಗೆ ದುಡಿದವರು. ಅವರನ್ನು ಗೆಲ್ಲಿಸಿ, ಜೂನ್‌ 20 ಹಾಗೂ 21ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಕಾರ್ಯಕ್ರಮದ ವೇದಿಕೆಗೆ ಕರೆದೊಯ್ಯಬೇಕು; ಮೋದಿ ಅವರಿಗೆ ಗೆಲುವಿನ ಉಡುಗೊರೆ ನೀಡಬೇಕು ಎಂಬ ಉದ್ದೇಶ ನಮ್ಮದಾಗಿತ್ತು. ಆದರೆ, ಆಗಲಿಲ್ಲ. ಮಧು ಅವರನ್ನು ಅಭಿನಂದಿಸುತ್ತೇನೆ ಎಂದರು.

ಫಲಿತಾಂಶದ ಬಗ್ಗೆ ಆತ್ಮಾವಲೋಕ ಮಾಡಿಕೊಳ್ತೀವಿ: ಇದು ಮೈಸೂರಿಗೆ ಸೀಮಿತವಾದ ಚುನಾವಣೆ ಆಗಿರಲಿಲ್ಲ. ನಗರದಲ್ಲಿ ಮತದಾರರು ನಮ್ಮ ಕೈಹಿಡಿಯಲಿಲ್ಲ, ಸ್ವಲ್ಪ ವ್ಯತ್ಯಾಸವಾಗಿದೆ. ಅಣ್ಣನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂಬ ನೋವು ನನಗೂ ಇದೆ. ಪ್ರಧಾನಿ ಕಾರ್ಯಕ್ರಮ ಇರುವುದರಿಂದ ತಯಾರಿಗಾಗಿ ಓಡಾಡುತ್ತಿದ್ದೇನೆ. ಜನರು ನಮ್ಮಿಂದ ಇನ್ನೂ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ ಎನಿಸುತ್ತದೆ. ಅದಕ್ಕೆ ತಕ್ಕಂತೆ ಕೆಲಸ ಮಾಡಲಿದ್ದೇವೆ. ಫಲಿತಾಂಶದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದಿದ್ದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಅವರ ಪಕ್ಷದ ಅಭ್ಯರ್ಥಿ 3ನೇ ಸ್ಥಾನದಲ್ಲಿದ್ದರೇಕೆ? ಆಗ ಅವರಿಗೆ ಮುಖಭಂಗವಾಗಿತ್ತೇ? 2018ರ ಚುನಾವಣೆಯಲ್ಲಿ ಏನಾಯಿತು? ಸಿದ್ದರಾಮಯ್ಯ ಅವರನ್ನು ಜನರು ಎಲ್ಲಿಗೆ ಕಳುಹಿಸಿದ್ದಾರೆ. ಸೊಕ್ಕಿನ ಮಾತುಗಳನ್ನು ಸಿದ್ದರಾಮಯ್ಯ ಬಿಡಲಿ’ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.

ಸೋಲಿಗೆ ನೂರಾರು ಕಾರಣ, ಪಿತೂರಿಗಳಿರುತ್ತವೆ. ಕಾಂಗ್ರೆಸ್‌ನವರು ಬಹಳ ದುಡ್ಡು ಹಂಚಿದರು ಎಂದು ನಾನು ಹೇಳುವುದಕ್ಕೆ ಹೋಗುವುದಿಲ್ಲ  ಎಂದು ಪ್ರತಿಕ್ರಿಯಿಸಿದರು.