ಮನೆ ರಾಜ್ಯ ಕಾಲ್ತುಳಿತ ದುರಂತ: ಪೊಲೀಸರನ್ನು ಹರಕೆಯ ಕುರಿ ಮಾಡಿದ ಸರಕಾರ : ಸಿಎಂ, ಡಿಸಿಎಂ, ಪರಂ ರಾಜೀನಾಮೆಗೆ...

ಕಾಲ್ತುಳಿತ ದುರಂತ: ಪೊಲೀಸರನ್ನು ಹರಕೆಯ ಕುರಿ ಮಾಡಿದ ಸರಕಾರ : ಸಿಎಂ, ಡಿಸಿಎಂ, ಪರಂ ರಾಜೀನಾಮೆಗೆ ವಿಜಯೇಂದ್ರ ಆಗ್ರಹ

0

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡ ಘಟನೆಗೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಹೊರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಲಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ್ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಈವೆಂಟ್ ಸಂಸ್ಥೆಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ವಿಜಯೇಂದ್ರ ಅವರ ಪ್ರಕಾರ, ನೈಜವಾಗಿ ಮುಖ್ಯಮಂತ್ರಿ ಆರೋಪಿ ನಂ.1, ಉಪಮುಖ್ಯಮಂತ್ರಿ ಆರೋಪಿ ನಂ.2, ಗೃಹ ಸಚಿವ ಆರೋಪಿ ನಂ.3 ಆಗಬೇಕು. “ಈವರೆಗೆ ಯಾವ ಕ್ರಮವೂ ತೆಗೆದುಕೊಳ್ಳದೆ, ರಾಜ್ಯ ಹೈಕೋರ್ಟ್ ಮಧ್ಯ ಪ್ರವೇಶಿಸಿದ ನಂತರ ಮಾತ್ರ ಸರಕಾರ ಎಚ್ಚೆತ್ತುಕೊಂಡಿದೆ” ಎಂದು ಅವರು ಟೀಕಿಸಿದರು.

ದುರ್ಘಟನೆಯ ನಂತರ ಪೊಲೀಸ್ ಕಮೀಷನರ್ ಬಿ. ದಯಾನಂದ್ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ವೈಫಲ್ಯಕ್ಕಾಗಿ ಬೇಹುಗಾರಿಕಾ ದಳದ ಅಧಿಕಾರಿಗಳನ್ನು ಯಾಕೆ ಅಮಾನತು ಮಾಡಿಲ್ಲ? ಎಂದು ಕೇಳಿದರು. ಬೇಹುಗಾರಿಕಾ ದಳ ನೇರ ಸಿಎಂ ಕೆಳಗಡೆ ಬರುತ್ತದೆ, ಅವರನ್ನು ಅಮಾನತು ಮಾಡಿದ್ರೆ ಇದು ಮುಖ್ಯಮಂತ್ರಿಗಳ ಬುಡಕ್ಕೇ ಬರಲಿದೆ. ಆದ್ದರಿಂದ ಅವರನ್ನ ಅಮಾನತು ಮಾಡಿಲ್ಲ ಎಂದು ವಿಜಯೇಂದ್ರ ತಿಳಿಸಿದರು. ನಾವು 30-40 ಸಾವಿರ ಜನರು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು. 2 ರಿಂದ 3 ಲಕ್ಷ ಜನರು ಬಂದಿದ್ದಾರೆ, ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವ ಮೂಲಕ ಬೇಹುಗಾರಿಕಾ ದಳದ ವೈಫಲ್ಯವನ್ನು ಸ್ವತಃ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

“ಕೆಎಸ್‌ಸಿಎ ಮತ್ತು ಆರ್‌ಸಿಬಿ ಮೊದಲೇ ಪೊಲೀಸ್ ಠಾಣೆಗೆ ಹೋದರೂ, ಅವರಿಗೂ ಅನುಮತಿ ನಿರಾಕರಿಸಲಾಗಿತ್ತು. ಇದನ್ನೂ ಮೀರಿ ಸರ್ಕಾರವೇ ಸಮಾರಂಭ ನಡೆಸಿದೆ. ಇದನ್ನು ಆಧರಿಸಿ ಈ ಕಾರ್ಯಕ್ರಮ ಕಾನೂನು ಬಾಹಿರವೆಂದು ಎಫ್‌ಐಆರ್ ಸಾಬೀತು ಮಾಡುತ್ತಿದೆ” ಎಂದು ವಿಜಯೇಂದ್ರ ಹೇಳಿದರು.

“ಅನುಮತಿ ಇಲ್ಲದ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಹೋಗಿದ್ದು ಯಾಕೆ? ಕಪ್ ಹಿಡಿದು ಮುತ್ತಿಕ್ಕಿದ್ದು ಯಾಕೆ? ಅವರಿಗೆ ಯಾರು ಅನುಮತಿ ಕೊಟ್ಟರು?” ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯ ವೇಳೆ ವಿಜಯೇಂದ್ರ ತಮ್ಮ ಅನುಭವ ಹಂಚಿಕೊಂಡು, “ಓರ್ವ ಆಟೋ ಚಾಲಕನೇ ಈ ಸರಕಾರವನ್ನು ಕಿತ್ತು ಹಾಕಬೇಕೆಂದು ಬೇಡಿಕೆ ಇಟ್ಟಿದ್ದ”ನ್ನು ಉದಾಹರಣೆ ನೀಡಿದರು. “ಇದು ಜನಸಾಮಾನ್ಯರ ಮಾತು” ಎಂದ ಅವರು, ರಾಜ್ಯ ಸರಕಾರದ ವಿರುದ್ಧ ಜನರ ಅಸಮಾಧಾನ ಹೆಚ್ಚುತ್ತಿದೆ ಎಂದು ಒತ್ತಾಯಿಸಿದರು.

ಈ ವಿಜಯೋತ್ಸವ ಸರ್ಕಾರಕ್ಕೆ ಯಾಕೆ ಬೇಕಿತ್ತು ಎಂದು ಕಾಂಗ್ರೆಸ್ಸಿನ ಮುಖಂಡ ಬಿ.ಕೆ ಹರಿಪ್ರಸಾದ್ ಅವರು ಪ್ರಶ್ನಿಸಿದ್ದಾರೆ. ಆರ್‌ಸಿಬಿ ಗೆಲುವು ಸಾಧಿಸಿದೆ ಎಂದು ರಾಜ್ಯ ಸರ್ಕಾರ ಯಾಕೆ ಸಂಭ್ರಮಾಚರಣೆ ಮಾಡಿದೆ ಎಂದು ಕೇಳಿದ್ದಾರೆ. 11 ಜನರ ಸಾವಿಗೆ ರಾಜ್ಯ ಸರ್ಕಾರವೇ ಉತ್ತರಿಸಬೇಕಿದೆ ಎಂದಿದ್ದಾಗಿ ಗಮನ ಸೆಳೆದರು.

ಈ ಸುದ್ದಿಗೋಷ್ಠಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಎನ್. ರವಿಕುಮಾರ್, ಎಂ. ಮಲ್ಲೇಶ್ ಬಾಬು, ಪ್ರತಾಪ್ ಸಿಂಹ, ಹರೀಶ್ ಪೂಂಜಾ ಮತ್ತು ಇನ್ನಿತರ ನಾಯಕರು ಭಾಗವಹಿಸಿದ್ದರು. ಅವರು ಕೂಡಾ ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರಕಾರವೇ ಹೊರಬೇಕೆಂದು ಒತ್ತಾಯಿಸಿದರು.