ಬೆಂಗಳೂರು: ಐಪಿಎಲ್ 2025ರ ಫೈನಲ್‌ನಲ್ಲಿ ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿ ಚೊಚ್ಚಲ ಟ್ರೋಫಿ ಜಯಿಸಿದ ಕ್ಷಣದಿಂದಲೇ ಕರ್ನಾಟಕದಲ್ಲಿ ಸಂಭ್ರಮ ಉಕ್ಕಿ ಹರಿದಿತ್ತು. ಆದರೆ ಸಂಭ್ರಮಾಚರಣೆ ದುರಂತವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದು, ಇದೀಗ ಈ ಘಟನೆಯ ಹಿನ್ನೆಲೆ ಈಗ ಹೊಸ ತಿರುವು ಪಡೆದುಕೊಂಡಿದೆ — ಸಾಮಾಜಿಕ ಮಾಧ್ಯಮದಲ್ಲಿ #ArrestKohli ಟ್ರೆಂಡ್ ಆಗುತ್ತಿದೆ.
ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ವೇಳೆ, ಕ್ರೀಡಾಂಗಣದ ಬಳಿ ಅಪಾರ ಜನಜಾತ್ರೆ ಉಂಟಾಗಿ, ಅವ್ಯವಸ್ಥೆಯ ಕಾರಣದಿಂದ ಕಾಲ್ತುಳಿತ ಉಂಟಾಯಿತು. ಈ ದುರಂತದಲ್ಲಿ 11 ಜನ ಅಮಾಯಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಕೂಡ ಘಟನೆಯ ತನಿಖೆ ಆರಂಭಿಸಿದ್ದು, ಪೋಲಿಸ್ ಇಲಾಖೆ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಈ ಅವಘಡದಲ್ಲಿ ಕೊಹ್ಲಿಯ ಪಾತ್ರವಿಲ್ಲದಿದ್ದರೂ, ಒಂದು ರೀತಿಯಲ್ಲಿ ಕೊಹ್ಲಿ ಕೂಡ ಈ ದುರಂತಕ್ಕೆ ಕಾರಣ ಎಂಬುದು ಕೆಲವರ ಅಭಿಪ್ರಾಯ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿಯ ಬಂಧನಕ್ಕೆ ಒತ್ತಾಯ ಜೋರಾಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ #ArrestKohli ಟ್ರೆಂಡ್ ಆಗುತ್ತಿದೆ.
ಅವಘಡ ನಡೆದ ಮರುದಿನವೇ ಕೊಹ್ಲಿ ಮುಂಬೈಗೆ ಮರಳಿದಿದ್ದರು. ಇದನ್ನು ಹಲವು ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದು, ಅದರ ಬದಲು ವಿರಾಟ್ ಕೊಹ್ಲಿ ಸಂತ್ರಸ್ಥರ ಕುಟುಂಬಗಳನ್ನು ಭೇಟಿ ಮಾಡಬೇಕಿತ್ತು. ಮೃತರ ಕುಟುಂಬಗಳಿಗೆ ನೆರವಾಗಬೇಕಿತ್ತು ಎಂಬುದು ಕೆಲವರ ವಾದವಾಗಿದೆ.
ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ಅವರವರೂ ಸಹ ಕೊಹ್ಲಿಯ ವಿರುದ್ಧ ಆರೋಪ ಹೊರಿಸಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ವಿರಾಟ್ ಕೊಹ್ಲಿಗೆ ವಿರುದ್ಧವೂ ದೂರು ದಾಖಲಿಸಲಾಗಿದೆ. ಈಗಾಗಲೇ ಆರ್‌ಸಿಬಿ ಹಾಗೂ ಡಿಎನ್‌ಎ ಈವೆಂಟ್ ಸಂಸ್ಥೆಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಜೊತೆಗೆ ಕೊಹ್ಲಿಯ ಹೆಸರು ಸೇರಿಸಬೇಕೆಂಬ ಒತ್ತಾಯ ಮುಂದುವರಿದಿದೆ.
ಈ ಸಮಯದಲ್ಲಿ ರಾಜ್ಯ ಸರ್ಕಾರ 11 ಮೃತರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಘೋಷಿಸಿದೆ. ಪೊಲೀಸ್ ಇಲಾಖೆ ವಿವಿಧ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ಆರ್‌ಸಿಬಿ ಸಂಸ್ಥೆಯ ಕೆಲ ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕೆಎಸ್‌ಸಿಎ ಹಾಗೂ ಆರ್‌ಸಿಬಿಯು ಕೂಡ ಗಾಯಾಳುಗಳಿಗೆ ನೆರವಾಗಲು ಮುಂದಾಗಿವೆ.
ಸದ್ಯ #ArrestKohli ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣ ಎಕ್ಸ್ (ಹಳೆ ಟ್ವಿಟ್ಟರ್) ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದು ಮುಂದಿನ ದಿನಗಳಲ್ಲಿ ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ ಯಾವ ದಿಕ್ಕು ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕೊಹ್ಲಿ ಬಂಧನದ ಕುರಿತು ಸಾಮಾಜಿಕ ಒತ್ತಡ ಬೆಳೆದರೂ, ಕಾನೂನು ಪ್ರಕ್ರಿಯೆಯು ಎಲ್ಲದಕ್ಕೂ ನಿರ್ಣಾಯಕವಾಗಲಿದೆ.















