ಮನೆ ಅಪರಾಧ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗ್ತಾರೆಂದು, ಅನ್ನಕ್ಕೆ ವಿಷ ಹಾಕಿ ಕುಟುಂಬವನ್ನೇ ಕೊಲ್ಲಲು ಯತ್ನಿಸಿದ ಮಹಿಳೆ ಬಂಧನ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗ್ತಾರೆಂದು, ಅನ್ನಕ್ಕೆ ವಿಷ ಹಾಕಿ ಕುಟುಂಬವನ್ನೇ ಕೊಲ್ಲಲು ಯತ್ನಿಸಿದ ಮಹಿಳೆ ಬಂಧನ

0

ಹಾಸನ: ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಾರೆಂದು ಶಂಕಿಸಿ ಪತಿ, ಮಕ್ಕಳು, ಅತ್ತೆ ಹಾಗೂ ಮಾವನನ್ನು ವಿಷ ಹಾಕಿ ಕೊಲ್ಲಲು ಯತ್ನಿಸಿದ ಭೀಕರ ಘಟನೆಯೊಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ಚೈತ್ರಾ (33) ಎಂಬ ಮಹಿಳೆಯು ಪೊಲೀಸರ ಕೈಗೆ ಸಿಕ್ಕಿದ್ದಾಳೆ.

11 ವರ್ಷಗಳ ಹಿಂದೆ ಗಜೇಂದ್ರ ಎಂಬುವವರೊಂದಿಗೆ ವಿವಾಹವಾದ ಚೈತ್ರಾ ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಹಲವು ವರ್ಷಗಳು ಸಂತೋಷವಾಗಿಯೇ ಕಳೆದಿದ್ದರೂ, ಕಳೆದ ಮೂರು ವರ್ಷಗಳಿಂದ ಚೈತ್ರಾ ಗಂಡನೊಂದಿಗೆ ಜಗಳವಾಡುತ್ತಿರುತ್ತಿದ್ದರು. ಈ ನಡುವೆ ಪುನೀತ್ ಎಂಬಾತನ ಪರಿಚಯವಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ, ಪತಿ ಗಜೇಂದ್ರ ಅವರು ಈ ವಿಷಯವನ್ನು ಚೈತ್ರಾಳ ತಂದೆ-ತಾಯಿಗೆ ತಿಳಿಸಿದ್ದಾರೆ. ಬಳಿಕ ಕುಟುಂಬ ಸದಸ್ಯರ ಮಧ್ಯಸ್ಥಿಕೆಯಿಂದ ಪತಿಯೊಂದಿಗೆ ಚೈತ್ರಾಳ ಸಂಬಂಧ ಪುನಃ ಸ್ಥಿರವಾಗಿತ್ತು.

ಆದರೆ, ಚೈತ್ರಾ ಮತ್ತೊಬ್ಬ ವ್ಯಕ್ತಿ ಶಿವು ಎಂಬವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಸಂಬಂಧದ ಬಗ್ಗೆ ಕುಟುಂಬಸ್ಥರಿಗೆ ಗೊತ್ತಾಗುವುದನ್ನು ತಪ್ಪಿಸಲು ಮತ್ತು ಯಾರೂ ಅಡ್ಡಿಯಾಗದಂತೆ ಮಾಡಲು, ಪತಿ, ಮಕ್ಕಳು, ಅತ್ತೆ ಹಾಗೂ ಮಾವನನ್ನು ಒಂದೇ ಸಮಯದಲ್ಲಿ ವಿಷ ಹಾಕಿ ಕೊಲ್ಲುವ ತಂತ್ರ ರೂಪಿಸಿದ್ದಳು.

ಅವರು ಊಟ ಅಥವಾ ತಿಂಡಿಯಲ್ಲಿ ವಿಷ ಬೆರೆಸುವ ಮೂಲಕ ಎಲ್ಲರ ಜೀವವನ್ನೇ ತೆಗೆಯಲು ಯತ್ನಿಸಿದ್ದಳು. ಈ ಕಾರ್ಯದಲ್ಲಿ ಶಿವು ಕೂಡ ಸಹಕರಿಸಿದ್ದಾನೆಂದು ಹೇಳಲಾಗಿದೆ. ಆದರೆ ಪತಿ ಗಜೇಂದ್ರ ಅವರು ಈ ಬೆಳವಣಿಗೆಯ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ ನಂತರ ಸತ್ಯ ಬಹಿರಂಗವಾಗಿದೆ.

ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿ, ಪೊಲೀಸರು ಚೈತ್ರಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.