ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4 ರಂದು ನಡೆದ ಆರ್‌ಸಿಬಿ ವಿಜಯೋತ್ಸವ ಸಮಾರಂಭದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡ ಪ್ರಕರಣ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದು, ಈಗ ಸಿಟಿಜನ್ ರೈಟ್ಸ್ ಫೌಂಡೇಷನ್ ಸಂಸ್ಥೆಯು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು, ತನಿಖೆ ಪೂರ್ಣಗೊಳ್ಳುವವರೆಗೆ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿಡುವಂತೆ ಮನವಿ ಮಾಡಿದೆ.
ಕಾಲ್ತುಳಿತದ ಬಳಿಕ ರಾತ್ರಿ ವೇಳೆಯಲ್ಲೇ ಕೆಲ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ನಾಲ್ವರು ವ್ಯಕ್ತಿಗಳನ್ನು ಬಂಧಿಸಿ ಜೂನ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದರೆ, ಈ ದುರಂತಕ್ಕೆ ನೇರ ಅಥವಾ ಪರೋಕ್ಷವಾಗಿ ಕಾರಣವಾದವರು ಹಿರಿಯ ರಾಜಕೀಯ ನಾಯಕರೇ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಸಿಟಿಜನ್ ರೈಟ್ಸ್ ಫೌಂಡೇಷನ್ ತನ್ನ ಪತ್ರದಲ್ಲಿ ಬಹುಪಾಲು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದು ಹೀಗಿದೆ: ಬಿಟ್‌ಕಾಯಿನ್, ಕೋವಿಡ್ ವ್ಯವಹಾರ, ಬಿಬಿಎಂಪಿ ಅಕ್ರಮಗಳು, ಕೆಐಎಡಿಬಿ ಹಗರಣ, ವೈದ್ಯಕೀಯ ಶಿಕ್ಷಣ ಇಲಾಖಾ ದೌರ್ಬಲ್ಯಗಳು ಮೊದಲಾದ ಅನೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಈ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಮೂಲಕ ಹೋರಾಟ ನಡೆಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಸತ್ಯಾಂಶಗಳನ್ನು ರಾಜ್ಯ ಸರ್ಕಾರ ಮುಚ್ಚಿಡುವ ಪ್ರಯತ್ನ ನಡೆಸುತ್ತಿದೆ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾದರೂ, ಸರ್ಕಾರದ ನಿರ್ಲಕ್ಷ್ಯ ಹಾಗೂ ಅಧಿಕಾರ ದುರುಪಯೋಗವೇ ಇದಕ್ಕೆ ಕಾರಣವಾಗಿದೆ. ಖಾಸಗಿ ಸಂಸ್ಥೆಯಾದ ಆರ್‌ಸಿಬಿ ತಂಡವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸನ್ಮಾನಿಸಲಾಗಿದ್ದು, ಇದು ರಾಜ್ಯ ಸಂಪತ್ತು ಹಾಗೂ ಅಧಿಕಾರದ ದುರುಪಯೋಗ ಎಂಬ ಆರೋಪ ಹೊರಿಸಲಾಗುತ್ತಿದೆ. ಸೀಮಿತ ವ್ಯವಸ್ಥೆಯ ನಡುವೆಯೂ ಭಾರಿ ಜನರ ಸೇರಿಕೆ, ಬ್ಯಾರಿಕೇಡ್ ಚಲ್ಲಾಪಿಲ್ಲಿಯಾದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಹೀಗಿದ್ದರೂ ಕೂಡ ಅಂದು ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಮಾರಂಭ ನಡೆಸಲು ಸಿಎಂ-ಡಿಸಿಎಂ ಅವರು ಅವಕಾಶ ಮಾಡಿಕೊಟ್ಟಿರುವುದು ಮಹಾ ಅಪರಾಧವಾಗಿದೆ.
ಆರ್‌ಸಿಬಿ ವಿಜಯಹೋತ್ಸವ ಸಮಾರಂಭದ ವೇಳೆ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತ ಬಗ್ಗೆ ಸತ್ಯಾಂಶಗಳನ್ನು ಮುಚ್ಚಿಕಾಕುವ ಪ್ರಯತ್ನ ರಾಜ್ಯ ಸರ್ಕಾರದಿಂದ ನಡೆದಿದೆ. ಸದರಿ ಪ್ರಕರಣ ಎಷ್ಟು ಗಂಭೀರವಾಗಿದೆ ಎಂದರೆ, ಸಿಎಂ ಮತ್ತು ಡಿಸಿಎಂಯವರಿಗೆ ಪರಿಸ್ಥಿತಿಯ ಅರಿವಿದ್ಧು ಉದ್ದೇಶಪೂರ್ವಕವಾಗಿ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವುದರಿಂದ ತನಿಖಾ ಪ್ರಕ್ರಿಯೆ ಮೇಲೆ ಯಾವುದೇ ರಾಜಕೀಯ ಒತ್ತಡ ಬರುವುದನ್ನು ತಪ್ಪಿಸಲು, ರಾಜ್ಯ ಸರ್ಕಾರವನ್ನೇ ತಾತ್ಕಾಲಿಕವಾಗಿ ಅಮಾನತಿನಲ್ಲಿ ಇಡಬೇಕು ಎಂಬುದು ಫೌಂಡೇಷನ್‌ನ ಒತ್ತಾಯ.














