ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 11 ಜನ ಸತ್ತಿದ್ದು, ಈ ದುರ್ಘಟನೆಗೆ ಸಿದ್ದರಾಮಯ್ಯನವರ ಸರ್ಕಾರ ನೇರ ಹೊಣೆ. ಆದ್ದರಿಂದ ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಒತ್ತಾಯಿಸಿದರು.
ದೇಶದ ಇಬ್ಬರು ಆರ್ಥಿಕ ಅಪರಾಧಿಗಳಿಗೆ ಸಂಬಂಧಿಸಿದ ಕಂಪನಿಗಳಲ್ಲಿ ಒಂದನೇಯದ್ದು ‘ಆರ್‌ಸಿಬಿ’ ವಿಜಯ್ ಮಲ್ಯರವರ ಕಂಪನಿ. ಎರಡನೇಯದ್ದು ‘ಐಪಿಎಲ್’ ಲಲಿತ್ ಮೋದಿಯವರದ್ದು. ಇಬ್ಬರೂ ಕೂಡ ದೇಶದ ಆರ್ಥಿಕ ಅಪರಾಧಿಗಳು. ಇಬ್ಬರು ಆರ್ಥಿಕ ಅಪರಾಧಿಗಳು ಅಪರಾಧವನ್ನು ಮಾಡಿ ದೇಶದ ಖಜಾನೆಗೆ ಕನ್ನ ಹಾಕಿ ದೇಶ ಬಿಟ್ಟು ಹೋದವರು ಎಂದು ಅವರು ಟೀಕಿಸಿದರು.
ಹಿಂದಿನ ಸರಕಾರ ಈ ಆರ್ಥಿಕ ಅಪರಾಧಿ ಕಂಪನಿಗಳ ಸಂಭ್ರಮಾಚಾರಣೆಗೆ ಮುಂದಾಗಿಲ್ಲ ಹಾಗೂ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿಲ್ಲ. ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿರುವಂತದ್ದು ಸಿದ್ದರಾಮಯ್ಯನವರ ಸರ್ಕಾರ ಎಂದು ಟೀಕಿಸಿದರು. ಮೊನ್ನೆ ಬೆಂಗಳೂರಿನಲ್ಲಿ ನಡೆದ ದುರಂತಕ್ಕೆ ನೇರವಾಗಿ ಕರ್ನಾಟಕ ಸರ್ಕಾರವೇ ಹೊಣೆಗಾರ ಎಂದು ಆರೋಪಿಸಿ, ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.














