ಬೆಂಗಳೂರು: ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ್ದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣದಲ್ಲಿ ತೀವ್ರ ಬೆಳವಣಿಗೆ ನಡೆದಿದೆ. ಈ ಪ್ರಕರಣದ ಎರಡನೇ ಆರೋಪಿ ಹಾಗೂ ಮೃತರ ಪುತ್ರಿ ಕೃತಿ ಓಂ ಪ್ರಕಾಶ್ ಅವರಿಗೆ ನೀಡಬೇಕೆಂದು ಕೇಳಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ವಜಾ ಮಾಡಿದೆ. ಇದರಿಂದಾಗಿ ಇದೀಗ ಕೃತಿಗೆ ಬಂಧನದ ಭೀತಿ ಎದುರಾಗಿದೆ.
ಏಪ್ರಿಲ್ 20 ರಂದು ನಿವೃತ್ತ ಡಿಜಿಪಿ ಓಂ ಪ್ರಕಾಶ್ (68) ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಓಂ ಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಈ ಹತ್ಯೆ ಪ್ರಕರಣದಲ್ಲಿ ಪತ್ನಿ ಪಲ್ಲವಿ ಓಂ ಪ್ರಕಾಶ್ ಹಾಗೂ ಪುತ್ರಿ ಕೃತಿಯವರ ಮೇಲೂ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸುತ್ತಿರುವ ಸಂದರ್ಭ, ಬಂಧನದಿಂದ ತಾತ್ಕಾಲಿಕ ರಕ್ಷಣೆಗಾಗಿ ಕೃತಿ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಇಂದು ನಡೆದ ವಿಚಾರಣೆಯಲ್ಲಿ ಕೋರ್ಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿಯ ವಜಾ ಹಿನ್ನಲೆಯಲ್ಲಿ ಅವನ ವಿರುದ್ಧ ಗಂಭೀರ ಆರೋಪಗಳು ಇರುವ ಹಿನ್ನೆಲೆಯಲ್ಲಿ ಬಂಧನ ಸಾಧ್ಯತೆ ಹೆಚ್ಚಾಗಿದೆ ಎಂದು ಕಾನೂನು ವಲಯದಲ್ಲಿ ನಿರೀಕ್ಷಿಸಲಾಗಿದೆ. ಈಗಾಗಲೇ ಪಲ್ಲವಿ ಓಂ ಪ್ರಕಾಶ್ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.














