ಮುಂಬೈ: ದಟ್ಟ ಸಂಚಾರಕ್ಕೆ ಹೆಸರುವಾಸಿಯಾದ ಮುಂಬೈನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕಿಕ್ಕಿರಿದು ತುಂಬಿದ್ದ ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಿಂದ ಬಿದ್ದು ಐವರು ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ. ಈ ದುರಂತದಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಘಟನೆ ಕೇಂದ್ರ ರೈಲ್ವೆ ವಲಯದ ದಿವಾ ಹಾಗೂ ಕೋಪಾರ್ ನಿಲ್ದಾಣಗಳ ನಡುವೆ ಸಂಭವಿಸಿದ್ದು, ರೈಲು ಕಸರಾಗೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ರೈಲು ತುಂಬಾ ಕಿಕ್ಕಿರಿದು ತುಂಬಿದ್ದರಿಂದ ಕೆಲ ಪ್ರಯಾಣಿಕರು ಬಾಗಿಲಿನಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿದ್ದರು.
ಕಿಕ್ಕಿರಿದ ಜನರ ನಡುವೆ ಕಂಟ್ರೋಲ್ ತಪ್ಪಿದ ಕೆಲವರು ರೈಲ್ವೆ ಹಳಿಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರುಗಳನ್ನು ಕಲ್ವಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಐವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಧ್ಯ ರೈಲ್ವೆ ಇಲಾಖೆ, ಅಪಘಾತದ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದೆ. ಹೆಚ್ಚಿನ ಭದ್ರತೆ ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.














