ಮನೆ ರಾಜ್ಯ ತುಮಕೂರನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಬೇಕು : ಗೃಹ ಸಚಿವ ಪರಮೇಶ್ವರ್

ತುಮಕೂರನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಬೇಕು : ಗೃಹ ಸಚಿವ ಪರಮೇಶ್ವರ್

0

ಬೆಂಗಳೂರು: ತುಮಕೂರನ್ನು ಗ್ರೇಟರ್ ಬೆಂಗಳೂರು ಮಹಾನಗರಾಭಿವೃದ್ಧಿ ವ್ಯಾಪ್ತಿಗೆ ಸೇರಿಸಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸರ್ಕಾರದ ಮುಂದಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಕುರಿತು ಸರ್ಕಾರಿ ಪ್ರಸ್ತಾವನೆ ನೀಡಲಾಗುತ್ತದೆಯೆಂದು ತಿಳಿಸಿದ್ದಾರೆ.

ಪರಮೇಶ್ವರ್ ಈ ಕುರಿತು ಮಾತನಾಡುತ್ತಾ, “ರಾಮನಗರವನ್ನು ‘ಬೆಂಗಳೂರು ದಕ್ಷಿಣ’ ಎಂದು ಪರಿಗಣಿಸಿ ಗ್ರೇಟರ್ ಬೆಂಗಳೂರಿಗೆ ಸೇರಿಸಲಾಗಿದೆ. ತುಮಕೂರು ಬೆಂಗಳೂರಿಗೆ ಕೇವಲ 70 ಕಿಮೀ ದೂರದಲ್ಲಿದೆ. ಅಭಿವೃದ್ಧಿಯ ದೃಷ್ಟಿಯಿಂದ, ತುಮಕೂರನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಬೇಕಾಗಿದೆ” ಎಂದು ಹೇಳಿದ್ದಾರೆ.

ಮೆಟ್ರೋ ಯೋಜನೆಯನ್ನೂ ತುಮಕೂರಿಗೆ ವಿಸ್ತರಿಸಬೇಕು ಎಂಬ ಒತ್ತಾಯವನ್ನು ಪರಮೇಶ್ವರ್ ಮಾಡಿದ್ದಾರೆ. “ತುಮಕೂರು ಬೆಳವಣಿಗೆಯ ಹಂತದಲ್ಲಿದೆ, ಇಂಡಸ್ಟ್ರಿಯಲ್ ಹಬ್ ಆಗುತ್ತಿದೆ. ಇದಕ್ಕೆ ಮೆಟ್ರೋ ಅಗತ್ಯವಾಗಿದೆ. ಜೊತೆಗೆ ಸಬ್‌ರ್ಬನ್ ರೈಲು ವ್ಯವಸ್ಥೆಯೂ ರೂಪುಗೊಳ್ಳಬೇಕು. ಎರಡೂ ಯೋಜನೆಗಳ ಪ್ರಸ್ತಾಪ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ನೀಡಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ಪರಮೇಶ್ವರ್ ಅವರು ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ವಿಚಾರವನ್ನೂ ಹಂಚಿಕೊಂಡರು. “ತುಮಕೂರು ಪ್ರವೇಶದ ಹಂತದಲ್ಲಿ ಆರ್ಚ್ ನಿರ್ಮಿಸಲು ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಹಣ ಮೀಸಲಾಗಿದೆ. ಇದಕ್ಕೆ ಕೇಂದ್ರದ ಅನುಮತಿ ಅಗತ್ಯವಿದ್ದು, ಈ ಸಂಬಂಧ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಲು ಸೋಮಣ್ಣ ಅವರನ್ನು ಭೇಟಿ ಮಾಡಿದ್ದೇನೆ” ಎಂದರು.

ತುಮಕೂರಿಗೆ ಪೂರೈಕೆಯಾಗುವ ಕುಡಿಯುವ ನೀರಿನ ಹಲವು ಯೋಜನೆಗಳನ್ನೂ ಕೇಂದ್ರದ ಬಳಿ ಒತ್ತಾಯಿಸಲಾಗಿದೆ. “ಈ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿದೆ. ಇದನ್ನು ಕೂಡ ಗೃಹ ಸಚಿವರಾಗಿ ನಾನು ತೀವ್ರವಾಗಿ ಮುಂದಿಟ್ಟಿದ್ದೇನೆ” ಎಂದು ಪರಮೇಶ್ವರ್ ಹೇಳಿದರು.