ಹಾಸನ: ಕಬ್ಬಿಣ ಕುಯ್ದು ಕಳ್ಳತನ ಮಾಡಲು ಒಪ್ಪಿಗೆ ನೀಡದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಹಾಸನ ನಗರದಲ್ಲಿ ನಡೆದಿದೆ. ಇದೊಂದು ಅನಿರೀಕ್ಷಿತ ಕ್ರೂರ ಕೃತ್ಯವಾಗಿದ್ದು, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಆರೋಪಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಹಾಸನದ ಎನ್.ಆರ್. ಸರ್ಕಲ್‌ನಲ್ಲಿ ಇರುವ ಬಾರ್‌ವೊಂದರಲ್ಲಿ ಈ ಘಟನೆ ನಡೆದಿದ್ದು, ಚಿತ್ರದುರ್ಗ ಮೂಲದ ಚಿತ್ರಲಿಂಗೇಶ್ವರ ಅಲಿಯಾಸ್ ಶಿವಣ್ಣ (35) ಎಂಬಾತನು ಗಾಯಗೊಂಡ ವ್ಯಕ್ತಿ. ಅತನ್ನೇ ಕೊಚ್ಚಲು ಯತ್ನಿಸಿದ ಆರೋಪಿ ಚೇತು ಅಲಿಯಾಸ್ ಚೇತನ್, ಹೊಳೇನರಸೀಪುರ ತಾಲ್ಲೂಕಿನ ಓಡನಹಳ್ಳಿ ಗ್ರಾಮದವನು ಎನ್ನಲಾಗಿದೆ.
ಚಿತ್ರಲಿಂಗೇಶ್ವರ ಹಾಸನದ ಸಿಟಿ ಬಸ್ ನಿಲ್ದಾಣದ ಹತ್ತಿರ ವಾಸವಿದ್ದು, ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸಂಜೆ ವೇಳೆ, ಚೇತು ಅವನನ್ನು ಮದ್ಯಪಾನಕ್ಕೆ ಬಾರ್‌ವೊಂದಕ್ಕೆ ಕರೆದಿದ್ದ. ಮದ್ಯಪಾನದ ವೇಳೆ, ಒಂದು ಕಡೆ ಇರುವ ಕಬ್ಬಿಣಗಳನ್ನು ಇಬ್ಬರೂ ಸೇರಿ ಕಳ್ಳತನ ಮಾಡಿ ಮಾರಾಟ ಮಾಡೋಣ ಎಂದು ಚೇತು ಪ್ರಸ್ತಾಪಿಸಿದ. ಆದರೆ, ಚಿತ್ರಲಿಂಗೇಶ್ವರ ರಾತ್ರಿ 9:30 ಆಗಿದೆ, ನನಗೆ ಸಾಧ್ಯವಿಲ್ಲ ಎಂದು ನಿರಾಕರಿಸಿದರು.
ಇದರಿಂದ ಕೋಪಗೊಂಡ ಚೇತು, “ನಾನು ನಿನಗೆ ಎಣ್ಣೆ ಕುಡಿಸಿದ್ದೇನೆ, ಊಟ ಕೊಡಿಸಿದ್ದೇನೆ. ನೀನೇನಾದರೂ ಬರಲಿಲ್ಲವಂದರೆ ನಿನ್ನನ್ನು ಮುಗಿಸುತ್ತೇನೆ” ಎಂದು ಬೆದರಿಕೆ ಹಾಕಿದ. ಬಾರ್‌ನಿಂದ ಹೊರಗೆ ಬಂದ ನಂತರ, ಚೇತು ತನ್ನ ಜೇಬಿನಲ್ಲಿ ಇಟ್ಟಿದ್ದ ಸಣ್ಣ ಫೋಲ್ಡಿಂಗ್ ಚಾಕುವಿನಿಂದ ಚಿತ್ರಲಿಂಗೇಶ್ವರನ ಮೇಲೆ ದಾಳಿ ನಡೆಸಲು ಯತ್ನಿಸಿದ್ದ.
ಚಿತ್ರಲಿಂಗೇಶ್ವರ ತಪ್ಪಿಸಿಕೊಂಡರೂ ಚೇತು ಎಡಕಣ್ಣ ಹತ್ತಿರ ಹಾಗೂ ಎಡ ಮೊಣಕೈಗೆ ಚಾಕು ಇರಿದು ಗಂಭೀರ ಗಾಯಗೊಳಿಸಿದ್ದ. ತೀವ್ರ ರಕ್ತಸ್ರಾವವಾಗಿ ಬಿದ್ದವನನ್ನು ಸ್ಥಳೀಯರು ಚಿಕಿತ್ಸೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಚೇತುವನ್ನು ಶೀಘ್ರವೇ ಬಂಧಿಸುವ ಸಾಧ್ಯತೆ ಇದೆ.














