ಮನೆ ರಾಜ್ಯ ಸಿದ್ದರಾಮಯ್ಯ ಅಧಿಕಾರದ ಸಿಂಹಾಸನ ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕುಮಾರಸ್ವಾಮಿ ಕಿಡಿ

ಸಿದ್ದರಾಮಯ್ಯ ಅಧಿಕಾರದ ಸಿಂಹಾಸನ ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕುಮಾರಸ್ವಾಮಿ ಕಿಡಿ

0

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತ ಮತ್ತು ಅದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ “ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮಕ್ಕೆ ನಾವು ಹೊಣೆಗಾರರಲ್ಲ” ಎಂಬ ಹೇಳಿಕೆಯನ್ನು ಖಂಡಿಸಿರುವ ನಿಖಿಲ್, ಎಕ್ಸ್ (ಹಿಂದಿನ ಟ್ವಿಟರ್) ಪ್ಲಾಟ್‌ಫಾರ್ಮ್‌ನಲ್ಲಿ ಆಕ್ರೋಶಭರಿತ ಪೋಸ್ಟ್ ಮಾಡಿದ್ದು, ಮುಖ್ಯಮಂತ್ರಿ ಆಡಳಿತದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ನಿಖಿಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ಹಾಗೂ ತೀವ್ರ ಟೀಕೆಯ ಟಿಪ್ಪಣಿಯಲ್ಲಿ, “ಆರ್‌ಸಿಬಿಯ ಗೆಲುವಿಗಾಗಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಒಂದು ವಿಐಪಿಗಳಿಗಾಗಿ ವಿಧಾನಸೌಧದಲ್ಲಿ, ಇನ್ನೊಂದು ಸಾರ್ವಜನಿಕರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಮುಖ್ಯಮಂತ್ರಿ ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೆ ಹೊರತು ಜನಸಾಮಾನ್ಯರನ್ನಲ್ಲ” ಎಂದು ಕಿಡಿಕಾರಿದ್ದಾರೆ.

ಮುಂದುವರಿದು, “11 ಮಂದಿ ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವಿಗೀಡಾದರೂ, ಕೆಲ ಸಚಿವರ ಕುಟುಂಬದವರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ಮುಖ್ಯಮಂತ್ರಿ ಪ್ರತಿಕ್ರಿಯೆ ಮಾತ್ರ – ‘ಅದು ನಮ್ಮ ಕಾರ್ಯಕ್ರಮವಲ್ಲ’ ಎಂಬುದೇ. ಕ್ರೀಡಾಂಗಣವು ವಿಧಾನಸೌಧದಿಂದ ಸ್ವಲ್ಪ ಮಾತ್ರ ದೂರದಲ್ಲಿದೆ. ಅದು ಪಾಕಿಸ್ತಾನವಲ್ಲ. ಇದು ನಿಮ್ಮ ರಾಜ್ಯ, ನಿಮ್ಮ ಜನರು, ನಿಮ್ಮ ಹೊಣೆಗಾರಿಕೆ” ಎಂದು ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ತಮ್ಮ ಟಿಪ್ಪಣಿಯಲ್ಲಿ, “ನೀವು ರಾಜ್ಯದ ಜನತೆಗಾಗಿ ನೇಮಕಗೊಂಡವರು. ಕಾರ್ಯಕ್ರಮದಲ್ಲಿ ಅತಿಥಿಯಂತೆ ವರ್ತಿಸುವುದನ್ನು ನಿಲ್ಲಿಸಿ. ಜನರ ಜೀವ ಉಳಿಸಲು ನಿಮ್ಮ ಕರ್ತವ್ಯವಿದೆ. ಫೋಟೋ ಶೋಗಳಿಗಾಗಿ ನೀವು ಆಯ್ಕೆಯಾಗಿಲ್ಲ. ಜನರ ಜೀವಗಳನ್ನು ರಕ್ಷಿಸಲು ನಿಮ್ಮನ್ನು ಆಯ್ಕೆಯಾಗಿದ್ದೀರಿ. ಆದರೆ ನೀವು ಜನರ ಜೀವಗಳನ್ನು ರಕ್ಷಿಸಲು ವಿಫಲರಾಗಿದ್ದೀರಿ” ಎಂದು ಹೇಳಿದ್ದಾರೆ.